ADVERTISEMENT

ಮಂಡ್ಯದಲ್ಲಿ 'ಚಿನ್ನದ ಹಗರಣ': ಕರಗಿಸಿ, ಮಾರಾಟ ಮಾಡಿದ ಚಿನ್ನ ಎಷ್ಟು?

ನಾಲ್ಕು ಫೈನಾನ್ಸ್‌ಗಳಲ್ಲಿ 500ಕ್ಕೂ ಹೆಚ್ಚು ನಕಲಿ ಖಾತೆಗಳು, ಸಿಬ್ಬಂದಿಯೂ ಶಾಮೀಲು ಬಹಿರಂಗ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 12:41 IST
Last Updated 21 ಡಿಸೆಂಬರ್ 2020, 12:41 IST
ಚಿನ್ನದ ಬಿಸ್ಕತ್‌ಗಳು (ಪ್ರಾತಿನಿಧಿಕ ಚಿತ್ರ)
ಚಿನ್ನದ ಬಿಸ್ಕತ್‌ಗಳು (ಪ್ರಾತಿನಿಧಿಕ ಚಿತ್ರ)   

ಮಂಡ್ಯ: ಮಹಿಳೆಯರಿಂದ ಚಿನ್ನ ಪಡೆದು ಮೋಸ ಮಾಡಿರುವ ಪ್ರಕರಣ ದಿನೇದಿನೇ ಹೊಸ ರೂಪ ಪಡೆಯುತ್ತಿದೆ. ಈಚೆಗೆ ಬಂಧಿತರಾದ ಮೂವರು ಆರೋಪಿಗಳು ಕೋಟ್ಯಂತರ ರೂಪಾಯಿ ಚಿನ್ನವನ್ನು ಕರಗಿಸಿ, ಮಾರಾಟ ಮಾಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಫೆಡ್‌ಬ್ಯಾಂಕ್‌ ಫೈನಾನ್ಸ್‌ ಸಿಬ್ಬಂದಿಯಾಗಿದ್ದ ಶಂಕರ್‌ ಹಾಗೂ ಶಾಲಿನಿ ಪ್ರಕರಣದ ಪ್ರಮುಖ ಆರೋಪಿಗಳಾದ ಪೂಜಾ ಹಾಗೂ ಸೋಮಶೇಖರ್‌ ಅವರ ಜೊತೆಗೂಡಿ 500ಕ್ಕೂ ಹೆಚ್ಚು ನಖಲಿ ಖಾತೆ ಸೃಷ್ಟಿಸಿದ್ದರು. ವಿ.ವಿ ರಸ್ತೆ, ಆರ್‌.ಪಿ ರಸ್ತೆಯಲ್ಲಿ ಕೆಲಸ ಮಾಡುವ ಕಾವಲುಗಾರರು, ಸೇಲ್ಸ್‌ ಹುಡುಗಿಯರನ್ನು ಕರೆತಂದು ಖಾತೆ ತೆರೆದಿದ್ದರು. ಜೊತೆಗೆ ಗುರುತು ಇಲ್ಲದ ಕಲ್ಪನಾ ಹೆಸರು ಬಳಸಿ, ಖಾತೆ ತೆರೆದು ಅಪಾರ ಮೌಲ್ಯದ ಚಿನ್ನ ಅಡಮಾನ ಮಾಡಿದ್ದರು ಎಂಬ ವಿಚಾರ ಪೊಲೀಸರಿಗೆ ಗೊತ್ತಾಗಿದೆ.

ಒಬ್ಬ ಗ್ರಾಹಕನಿಂದ 10ಕ್ಕೂ ಹೆಚ್ಚು ಖಾತೆ ತೆರೆಸಿದ್ದರು. ಹೊಸ ಚಿನ್ನ ತಂದಾಗ ಹಳೇ ಖಾತೆಯಲ್ಲೇ ಚಿನ್ನ ಅಡಮಾನ ಮಾಡುತ್ತಿದ್ದರು. ಖಾತೆ ತೆರೆದವರಿಗೆ ಕಮೀಷನ್‌ ಕೊಡುತ್ತಿದ್ದರು. ಒಂದು ಒಡವೆಯನ್ನು ನಾಲ್ಕೈದು ಬಾರಿ ಅಡಮಾನ ಮಾಡಿ, ಹಣ ಪಡೆಯುತ್ತಿದ್ದರು. ಅದಕ್ಕಾಗಿ ನಕಲಿ ದಾಖಲಾತಿ ಸೃಷ್ಟಿ ಮಾಡುತ್ತಿದ್ದರು.

ADVERTISEMENT

ಆರೋಪಿಗಳು ಮಹಿಳೆಯರಿಂದ ಪಡೆದ ಚಿನ್ನವನ್ನು ಪರಿಶೀಲನೆ ಮಾಡಲು ರಾಜೇಶ್‌ ಎಂಬ ಕುಶಲಕರ್ಮಿಯನ್ನು (ಅಪ್ರೈಸರ್‌) ನೇಮಕ ಮಾಡಿಕೊಂಡಿದ್ದರು. ಈತನ ನೇತೃತ್ವದಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಕರಗಿಸಿ, ಪೇಟೆಬೀದಿ ಮುಖ್ಯರಸ್ತೆಯಲ್ಲಿರುವ ಪ್ರಸಿದ್ಧ ಚಿನ್ನದ ಮಳಿಗೆಯೊಂದರಲ್ಲಿ ಮಾರಾಟ ಮಾಡುತ್ತಿದ್ದರು.

ಈಗ ಪೊಲೀಸರು ರಾಜೇಶ್‌ನನ್ನೂ ಬಂಧಿಸಿದ್ದು ಕರಗಿಸಿದ ಚಿನ್ನದ ಪ್ರಮಾಣ ತಿಳಿದುಬಂದಿದೆ. ಮಾರಾಟ ಮಾಡಿರುವ ಚಿನ್ನದ ವಿವರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈಚೆಗೆ ಪೇಟೆಬೀದಿ ಚಿನ್ನದಂಗಡಿಗೆ ದಾಳಿ ನಡೆಸಿ ಅಪಾರ ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿನ್ನದ ದರ ಕಡಿಮೆಯಾದಾಗ ಆರೋಪಿಗಳು ಫೈನಾನ್ಸ್‌ಗಳಲ್ಲಿ ಅಡಮಾನ ಮಾಡಿದ್ದರು. ಒಮ್ಮೆಲೇ ಚಿನ್ನದ ದರ ₹ 5 ಸಾವಿರ ಗಡಿ ತಲುಪಿದಾಗ ಎಲ್ಲಾ ಚಿನ್ನವನ್ನು ಬಿಡಿಸಿ, ಕರಗಿಸಿ ಮಾರಾಟ ಮಾಡುತ್ತಿದ್ದರು. ಬಂದ ಲಾಭವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಒಟ್ಟು ಚಿನ್ನದಲ್ಲಿ ಶೇ 20ರಷ್ಟು ಒಡವೆಗಳನ್ನು ನಿಜವಾದ ಮಾಲೀಕರ ಹೆಸರಿನಲ್ಲೇ ಇಟ್ಟಿದ್ದರು. ಬೇರೆಬೇರೆ ಸಂದರ್ಭದಲ್ಲಿ ಅವರನ್ನು ಕರೆಸಿ ಫೋಟೊ ತೆಗೆಸಿ, ರಶೀದಿ ಕೊಟ್ಟಿದ್ದರು. ಉಳಿದ ಶೇ 80ರಷ್ಟು ಚಿನ್ನವನ್ನು ಬಿಸ್ಕತ್‌ ಮಾಡಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಚಿನ್ನದ ಮಾಲೀಕರು ತಮ್ಮ ಹೆಸರಿನಲ್ಲಿ ಇಟ್ಟಿದ್ದ ಒಡವೆಗಳನ್ನಷ್ಟೇ ಬಿಡಿಸಿಕೊಂಡಿದ್ದಾರೆ. ಉಳಿದ ಚಿನ್ನ ಆರೋಪಿಗಳ ಪಾಲಾಗಿದೆ.

ಮೊದಲು ನೇಮಕ ಮಾಡಿದ್ದ ತನಿಖಾ ತಂಡವು ಮಹಿಳೆಯರು ಕೊಟ್ಟ ದೂರಿನ ಮೇರೆಗೆ ಪೂಜಾ, ಸೋಮಶೇಖರ್‌ ಸುತ್ತ ತನಿಖೆ ಮಾಡುತ್ತಿತ್ತು. ಆದರೆ ಈಗ ನೇಮಕ ಮಾಡಿರುವ ಡಿಸಿಐಬಿ ಇನ್‌ಸ್ಪೆಕ್ಟರ್‌ ಹರೀಶ್‌ಕುಮಾರ್‌ ನೇತೃತ್ವದ ತಂಡ ಚಿನ್ನ ಅಡಮಾನದ ನಂತರ ನಡೆದಿರುವ ಬೆಳವಣಿಗೆಗಳತ್ತ ಗಮನ ಹರಿಸಿದೆ. ಹೀಗಾಗಿ ಬ್ಯಾಂಕ್‌ ಸಿಬ್ಬಂದಿಯ ಪಾತ್ರ ಬಯಲಾಗಿದ್ದು ಅವರನ್ನು ಬಂಧಿಸಿದ್ದಾರೆ.

‘ಚಿನ್ನ ಕಳೆದುಕೊಂಡ ಮಹಿಳೆಯರು ಖಿನ್ನತೆಗೆ ಒಳಗಾಗಿದ್ದಾರೆ. ಆದರೆ ಅವ್ಯವಹಾರ ನಡೆಸಿದ ಫೈನಾನ್ಸ್‌ಗಳು ಯಾವುದೇ ಅಡೆತಡೆ ಇಲ್ಲದೇ ಬಾಗಿಲು ತೆರೆದಿವೆ. ತಮ್ಮ ವಹಿವಾಟಿನ ಲೆಕ್ಕ ಪರಿಶೋಧನೆ ಮಾಡಿಸಿಕೊಳ್ಳಲು ಪೊಲೀಸರು ಸಹಾಯ ಮಾಡಿರುವ ವಿಚಾರ ಬಹಿರಂಗಗೊಂಡಿದೆ. ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗುವುದು’ ಎಂದು ವಕೀಲರೊಬ್ಬರು ತಿಳಿಸಿದರು.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

‘ಸದ್ಯ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಚುನಾವಣೆ ನಂತರ ಪೊಲೀಸ್‌ ವಶಕ್ಕೆ ಪಡೆಯಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಹೇಳಿದರು.

‘ಸಮಗ್ರವಾಗಿ ಪ್ರಕರಣದ ತನಿಖೆ ನಡೆಯಲಿದೆ. ಸಂಪೂರ್ಣ ವಿವರವನ್ನು ನಂತರ ನೀಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.