
ಮದ್ದೂರು: ತಾಲ್ಲೂಕಿನ ಗೊರವನಹಳ್ಳಿ ಗ್ರಾಮವನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ಗ್ರಾಮದ ಗ್ರಾಮ ಪಂಚಾಯಿತಿ ಮುಂದೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯ ಸ್ಥಳದ ಗೇಟ್‌ಗೆ ಬೀಗ ಹಾಕಿರುವುದನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕಿ ಶ್ರೀಲತಾ ಮಾತನಾಡಿ, ‘16 ದಿನಗಳಿಂದ ನಮ್ಮ ಗೊರವನಹಳ್ಳಿ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸದಂತೆ ಆಗ್ರಹಿಸಿ ಹಲವಾರು ಬಾರಿ ಗ್ರಾ. ಪಂ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಆದರೆ ಉದ್ದೇಶಪೂರ್ವಕವಾಗಿ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಇಂದು ಆವರಣದ ಗೇಟ್ ಗೆ ಬೀಗ ಹಾಕಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದಕ್ಕೆ ಗ್ರಾ.ಪಂ. ಪಿಡಿಒ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ. ಅವರ ಈ ವರ್ತನೆಯಿಂದ ಗ್ರಾ. ಪಂ. ಕಟ್ಟಡದಲ್ಲೇ ಇರುವ ಗ್ರಂಥಾಲಯ ಹಾಗೂ ಅಂಚೆ ಕಚೇರಿಗಳಿವೆ ಬರುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಅದಕ್ಕೆ ಅಧಿಕಾರಿಗಳೇ ನೇರ ಹೊಣೆ’ ಎಂದರು.
ಕೂಡಲೇ ಗೇಟ್ ಅನ್ನು ತೆಗೆಯದಿದ್ದರೆ ನಾಳೆ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಇಲ್ಲದಿದ್ದರೆ ಬೀಗವನ್ನು ಒಡೆದು ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷರಾದ ಉಮೇಶ್, ಸದಸ್ಯರಾದ ಶಂಕರೇಗೌಡ, ಮುಖಂಡರಾದ ಪ್ರಸನ್ನ, ಮಹೇಶ್, ಯದುನಂದನ್, ಅವಿನಾಶ್, ಪ್ರಮೋದ್, ಸಂತೋಷ್, ಕುಮಾರ್, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.