ADVERTISEMENT

ಸರ್ಕಾರಿ ಶಾಲೆ ಉಳಿವಿಗೆ ಉಪವಾಸ ಸತ್ಯಾಗ್ರಹ

ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘದ ಕಾರ್ಯಕರ್ತರಿಂದ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 8:31 IST
Last Updated 14 ಡಿಸೆಂಬರ್ 2025, 8:31 IST
ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಶಾಶ್ವತವಾಗಿ ಬೀಗ ಹಾಕಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಲ್ಲಾಳಿಯಾಗಿ ನಡೆದುಕೊಳ್ಳುವುದನ್ನು ಬಿಡಬೇಕೆಂದು ಆಗ್ರಹಿಸಿ ರಾಜ್ಯ ಎಸ್‌ಡಿಎಂಸಿ ಸಂಘ, ರೈತ ಸಂಘ, ಕೆಆರ್‌ಎಸ್‌, ನೆರವು ಸಂಸ್ಥೆ, ಕರುನಾಡು ಸೇವಕರು ಸಂಘಟನೆಯ ಮುಖಂಡರು ಮಂಡ್ಯ ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದರು
ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಶಾಶ್ವತವಾಗಿ ಬೀಗ ಹಾಕಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಲ್ಲಾಳಿಯಾಗಿ ನಡೆದುಕೊಳ್ಳುವುದನ್ನು ಬಿಡಬೇಕೆಂದು ಆಗ್ರಹಿಸಿ ರಾಜ್ಯ ಎಸ್‌ಡಿಎಂಸಿ ಸಂಘ, ರೈತ ಸಂಘ, ಕೆಆರ್‌ಎಸ್‌, ನೆರವು ಸಂಸ್ಥೆ, ಕರುನಾಡು ಸೇವಕರು ಸಂಘಟನೆಯ ಮುಖಂಡರು ಮಂಡ್ಯ ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದರು   

ಮಂಡ್ಯ: ಮ್ಯಾಗ್ನೆಟ್‌ ಶಾಲೆಗಳು ಹಾಗೂ ಕೆಪಿಎಸ್‌ ಶಾಲೆಗಳು ಎಂಬ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಶಾಶ್ವತವಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಲ್ಲಾಳಿಯಾಗಿ ನಡೆದುಕೊಳ್ಳುವುದನ್ನು ಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘದ ಕಾರ್ಯಕರ್ತರು ಶನಿವಾರ ದಿಂದ ನಗರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ನಗಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಮೂರು ದಿನಗಳವರೆಗೆ ಧರಣಿ ಆರಂಭಿಸಿದ್ದು, ಕೆಆರ್‌ಎಸ್‌, ಕರುನಾಡ ಸಂಘಟನೆ, ನೆರವು ಸಂಸ್ಥೆಯ ಮುಖಂಡರು ಬೆಂಬಲ ನೀಡಿದರು.

ರಾಜ್ಯದ 41,905 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೂ ಎಲ್‌ಕೆಜಿ ಯಿಂದ ಐದನೇ ತರಗತಿವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್‌ಸಿ ಶಿಕ್ಷಣ ಹಾಗೂ ಮೂಲ ಸೌಕರ್ಯ ಒದಗಿಸಬೇಕು. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಆರನೇ ತರಗತಿಯಿಂದ ಪಿಯುಸಿವರೆಗೆ ನವೋದಯ ಮಾದರಿ ಸಿಬಿಎಸ್‌ಸಿ ವಸತಿ ಶಾಲಾ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರದ ಕೈಯಲ್ಲಿ ಆಗದಿದ್ದರೆ ಶಿಕ್ಷಣ ಇಲಾಖೆಗೆ ನೀಡುವ ಅನುದಾನವನ್ನು ನೇರವಾಗಿ ಪ್ರತಿಯೊಂದು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಖಾತೆಗೆ ವರ್ಗಾಹಿಸಿದರೆ, ಹಾಲಿನ ಡೇರಿ ರೀತಿ, ಎಸ್‌ಡಿಎಂಸಿಯವರೇ ಶಿಕ್ಷಕರ ನೇಮಕ ಮಾಡಿ, ಮೂಲ ಸೌಕರ್ಯ ಒದಗಿಸಿ ಶಾಲೆಗಳನ್ನು ಮುನ್ನಡೆಸಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಕೆಲಸಕ್ಕೆ ಶಾಶ್ವತವಾಗಿ ತೆರೆ ಎಳೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್‌, ನೆರವು ಸ‌ಂಸ್ಥೆಯ ಮರಿತಿಮ್ಮೇಗೌಡ, ಕೆಆರ್‌ಎಸ್‌ ಪಕ್ಷದ ಅರುಣ್‌, ನೆರವು ಸಂಸ್ಥೆಯ ಮರಿತಿಬ್ಬೇಗೌಡ, ಫಯಾಜ್ ಮೈಸೂರು, ಕವಿತಾ ಕನ್ನಡ ಮನಸು, ಕವಿತಾ ದೇಗೌ, ಧಾರವಾಡ ರವಿಚಂದ್ರ ಚೌಕಲಬ್ಬಿ, ರಾಜುಗೌಡ ಮೈಸೂರು, ಎಸ್‌ಡಿಎಂಸಿ ಸಂತೋಷ್‌, ಅನಿಲ್‌ಗೌಡ, ನಳಿನಿ ಬೆಂಗಳೂರು ಭಾಗವಹಿಸಿದ್ದರು.

ಸರ್ಕಾರಿ ಶಾಲೆ ಉಳಿಸಿಕೊಳ್ಳಿ

‘ರಾಜ್ಯದಲ್ಲಿ ಸುಮಾರು 40 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅವರ ಪೋಷಕರನ್ನೆಲ್ಲ ಸೇರಿಸಿದರೆ ಸುಮಾರು ಒಂದು ಕೋಟಿಗೂ ಹೆಚ್ಚು ಜನರು ಸಿಗುತ್ತಾರೆ ಆದರೆ ಇವರೆಲ್ಲರೂ ಒಂದು ದಿನ ಬೀದಿಗಿಳಿದು ಹೋರಾಟ ಮಾಡಿದೆ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ ಇನ್ನಾದರೂ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಕಡೆ ಗಮನ ಹರಿಸಬೇಕು’ ಎಂದು ಧರಣಿ ನಿರತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.