ಮಂಡ್ಯ: ‘ಎಚ್.ಡಿ.ಚೌಡಯ್ಯ ಅವರು ನಡೆದು ಬಂದ ಹಾದಿ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆಯನ್ನು ಮರೆಯಲಾಗುವುದಿಲ್ಲ. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಮೌಲ್ಯಯುತವಾದುದು’ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಶ್ಲಾಘಿಸಿದರು.
ನಗರದ ಕೆ.ವಿ. ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ನಡೆದ ಎಚ್.ಡಿ.ಚೌಡಯ್ಯ ಅವರ 98ನೇ ಜನ್ಮದಿನಾಚರಣೆ ಹಾಗೂ 2025ನೇ ಸಾಲಿನ ರಾಜ್ಯ ಮಟ್ಟದ ಎಚ್.ಡಿ. ಚೌಡಯ್ಯ ಶಿಕ್ಷಣ, ಸಹಕಾರ ಮತ್ತು ಕ್ರೀಡಾ ಪ್ರಶಸ್ತಿಗಳ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಚೌಡಯ್ಯ ಶಿಕ್ಷಣ ಪ್ರಶಸ್ತಿ’ ಪಡೆದುಕೊಂಡಿರುವ ರಾಮಸ್ವಾಮಿ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಜನತಾ ಶಿಕ್ಷಣ ಸಂಸ್ಥೆಯು ಒಳ್ಳೆಯ ವ್ಯಕ್ತಿ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಸರ್ಕಾರದ ಮಟ್ಟದಲ್ಲಿ ಪ್ರಶಸ್ತಿಗೆ ಲಾಬಿ ನಡೆಸುವವರನ್ನು ನಾವು ಕಂಡಿದ್ದೇವೆ. ಪ್ರಸ್ತುತದಲ್ಲಿ ಪ್ರಶಸ್ತಿಗಳಿಗೆ ಗೌರವ ಇಲ್ಲದ ಸ್ಥಿತಿಗೆ ತಲುಪಿದ್ದೇವೆ. ಅರ್ಹರಿಗೆ ಪ್ರಶಸ್ತಿ ಸಿಕ್ಕಾಗ ಅದರ ಮೌಲ್ಯ ಹೆಚ್ಚಾಗುತ್ತದೆ’ ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ಕೆ. ರಾಮಸ್ವಾಮಿ, ‘ಕೆ.ವಿ. ಶಂಕರಗೌಡ ಅವರು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ಮಂಡ್ಯ ಜಿಲ್ಲೆಯಲ್ಲಿ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯದ ಕೆಲಸ’ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜನತಾ ಶಿಕ್ಷಣ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ. ಶ್ರೀಧರ್, ‘ಚೌಡಯ್ಯ ಅವರ ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ. ನೇರನುಡಿಯುಳ್ಳ ಚೌಡಯ್ಯ ಅವರು ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಸಹಕಾರ ಚಳವಳಿ ಸೇರಿದಂತೆ ಹುಟ್ಟು ಹೋರಾಟಗಾರರಂತೆಯೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು’ ಎಂದು ತಿಳಿಸಿದರು.
ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ. ಮೋಹನ್‌ಕುಮಾರ್ ಭಾಗವಹಿಸಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಸ್ಥೆ ಹಾಗೂ ವ್ಯಕ್ತಿಗಳಾದ ಎಂ.ಕೆ. ರಾಮಸ್ವಾಮಿ (ಎಚ್.ಡಿ. ಚೌಡಯ್ಯ ಶಿಕ್ಷಣ ಪ್ರಶಸ್ತಿ), ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಚ್.ಡಿ. ಚೌಡಯ್ಯ ಸಹಕಾರ ಪ್ರಶಸ್ತಿ) ವಿಲ್ಫೆಡ್ ಡಿಸೋಜ ಅವರಿಗೆ (ಎಚ್.ಡಿ. ಚೌಡಯ್ಯ ಕ್ರೀಡಾ ಪ್ರಶಸ್ತಿ) ತಲಾ ₹20 ಸಾವಿರ ನಗದು ಮತ್ತು ಪಾರಿತೋಷಕವನ್ನು ನೀಡಿ ಸನ್ಮಾನಿಸಲಾಯಿತು.
2025ನೇ ಸಾಲಿನ ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕತರಾದ ಎಚ್.ಪಿ. ಲಲಿತ್, ಎಚ್.ಎಂ.ಪ್ರಜ್ವಲ್, ಕೆ.ಎಸ್. ಪುಣ್ಯಶ್ರೀ, ಎಚ್.ಸಿ. ಚೇತನ್‌ಗೌಡ ಅವರಿಗೆ ತಲಾ ₹5 ಸಾವಿರ ಮತ್ತು ಪಾರಿತೋಷಕ ನೀಡಿ ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.