ADVERTISEMENT

ಸಂಸದರ ವೇತನವನ್ನು ಶಿಕ್ಷಕರಿಗೆ ದೇಣಿಗೆಯಾಗಿ ನೀಡುವೆ: ಕೇಂದ್ರ ಸಚಿವ ಎಚ್‌ಡಿಕೆ

ಮೈಷುಗರ್ ಶಾಲೆಗೆ ವಾಹನ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:57 IST
Last Updated 7 ನವೆಂಬರ್ 2025, 7:57 IST
ಮಂಡ್ಯದ ಮೈಷುಗರ್ ಶಾಲೆಗೆ ಸಿ.ಎಸ್‌.ಆರ್‌. ನಿಧಿಯಿಂದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಶಾಲಾ ವಾಹನವನ್ನು ನೀಡಿದ ಸಂದರ್ಭ ಮಕ್ಕಳನ್ನು ಬಸ್‌ ಹತ್ತಿಸಿದರು 
ಮಂಡ್ಯದ ಮೈಷುಗರ್ ಶಾಲೆಗೆ ಸಿ.ಎಸ್‌.ಆರ್‌. ನಿಧಿಯಿಂದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಶಾಲಾ ವಾಹನವನ್ನು ನೀಡಿದ ಸಂದರ್ಭ ಮಕ್ಕಳನ್ನು ಬಸ್‌ ಹತ್ತಿಸಿದರು    

ಮಂಡ್ಯ: ಕಳೆದ ಹಲವು ತಿಂಗಳಿಂದ ವೇತನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ನಗರದ ಐತಿಹಾಸಿಕ ಮೈಷುಗರ್ ಶಾಲೆಯ ಶಿಕ್ಷಕರ ನೆರವಿಗೆ ಧಾವಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ವೇತನ ಪಾವತಿಸಲು ಕೊಡುವುದಾಗಿ ಘೋಷಿಸಿದರು.

ಮೈಷುಗರ್ ಶಾಲೆಯ ಆವರಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಿ.ಎಸ್‌.ಆರ್‌. ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಅತ್ಯಾಧುನಿಕ ಶಾಲಾ ವಾಹನವನ್ನು ಮೈಷುಗರ್ ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ವೇತನವಿಲ್ಲದೆ ಕೆಲಸ ಮಾಡುತ್ತಿರುವುದು ಬಹಳ ನೋವಿನ ವಿಚಾರ. ಈವರೆಗೂ ಸುಮಾರು ₹20 ಲಕ್ಷ ಬಾಕಿ ವೇತನವಿದೆ. ಹೀಗಾಗಿ ನನ್ನ ವೇತನದ ಮೊತ್ತವನ್ನೇ ದೇಣಿಗೆಯಾಗಿ ನೀಡುತ್ತಿದ್ದೇನೆ. ಅನೇಕ ತಿಂಗಳಿಂದ ಶಿಕ್ಷಕರಿಗೆ ವೇತನ ನೀಡದಿರುವ ವ್ಯಕ್ತಿಗಳು ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ನಾನು ಈ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ 13 ತಿಂಗಳಿಂದ ಶಿಕ್ಷಕರಿಗೆ ವೇತನ ನೀಡಲಾಗಿಲ್ಲ ಎನ್ನುವ ಮಾಹಿತಿ ಸಿಕ್ಕಿತು. ಸಿ.ಎಸ್‌.ಆರ್‌. ನಿಧಿಯಿಂದ ವೇತನ ಕೊಡುವ ಅವಕಾಶ ಇಲ್ಲ ಎಂದು ಸಚಿವರು ಮಾಹಿತಿ ನೀಡಿದರು ಎಂದರು.

ADVERTISEMENT

ನನ್ನ ಆರೋಗ್ಯದ ಕಾರಣದಿಂದ ಜಿಲ್ಲೆಗೆ ಭೇಟಿ ನೀಡುವುದು ಕೊಂಚ ತಡವಾಯಿತು. ₹10 ಕೋಟಿ ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಶಾಲೆಯ ಟ್ರಸ್ಟ್ ಸದಸ್ಯರ ಜತೆ ಚರ್ಚೆ ನಡೆಸಲಾಗಿದೆ. ₹10 ಕೋಟಿ ಹಣವನ್ನು ಅದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ಘೋಷಿಸಿದರು.

ಕಾರ್ಯಕ್ರದಲ್ಲಿ ಶಾಲೆಯ ಮಕ್ಕಳ ಜೊತೆಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಮಾಜಿ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಶಿವಕುಮಾರ್ ಹಾಗೂ ಶಾಲಾ ಸಿಬ್ಬಂದಿ, ಟ್ರಸ್ಟ್ ಸದಸ್ಯರು ಹಾಗೂ ಜೆಡಿಎಸ್ ನಾಯಕರು ಪಾಲ್ಗೊಂಡಿದ್ದರು. 

‘ಕಮಿಷನ್‌ ಪಡೆದಿಲ್ಲ ವರ್ಗಾವಣೆಯಿಂದ ಹಣ ಗಳಿಸಿಲ್ಲ’

‘ಮೈಷುಗರ್ ಶಾಲೆಯ ಅಭಿವೃದ್ಧಿ ಬಗ್ಗೆ ಶಾಲೆಯ ಟ್ರಸ್ಟ್ ನವರು ಈವರೆಗೂ ನನ್ನೊಂದಿಗೆ ಕೊನೇಪಕ್ಷ ಒಂದು ಸಭೆಯನ್ನು ನಡೆಸಿಲ್ಲ. ಆ ಟ್ರಸ್ಟ್‌ನಲ್ಲಿ ಯಾರು ಯಾರಿದ್ದಾರೆ ಅನ್ನುವ ಮಾಹಿತಿ ಕೂಡ ನನಗೆ ಇಲ್ಲ. ಸಂಸದನಾಗಿ ನಾನು ಕೂಡ ಒಬ್ಬ ಟ್ರಸ್ಟಿ ಇದ್ದೇನೆ. ಆದರೂ ಸಭೆ ಕರೆದಿಲ್ಲ ಯಾಕೆ?’ ಎಂದು ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

‘ನನ್ನ ವೇತನದ ಹಣವನ್ನು ಶಿಕ್ಷಕರಿಗೆ ಕೊಡುತ್ತಿದ್ದೇನೆ. ಇದು ಪಾಪದ ಹಣವಲ್ಲ. ನಾನೇನು ಕಮಿಷನ್ ತೆಗೆದುಕೊಂಡಿಲ್ಲ. ವರ್ಗಾವಣೆಯಿಂದ ಹೊಡೆದುಕೊಂಡ ಹಣವಲ್ಲ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನನ್ನ ಬಗ್ಗೆ ಯಾರೇ ಏನೇ ಹೇಳಿಕೆ ಕೊಟ್ಟರು ಕೂಡ ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂಬುದು ಗೊತ್ತಿಲ್ಲವೇ? ನನ್ನ ಕೈಯಲ್ಲಿ ಆಗುವಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದೇನೆ’ ಎಂದು ಕೇಂದ್ರ ಸಚಿವರು ಖಾರವಾಗಿ ನುಡಿದರು.

‘ಶಂಕರಪುರ ಶಾಲೆ ಅಭಿವೃದ್ಧಿಗೆ ₹1.4 ಕೋಟಿ’

ಮಂಡ್ಯ ನಗರದ ಶಂಕರಪುರ ಸರ್ಕಾರಿ ಶಾಲೆಗೆ ಗುರುವಾರ ಭೇಟಿ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ₹1.4 ಕೋಟಿ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಲೆಯಲ್ಲಿ ಆರು ಹೊಸ ಕೊಠಡಿ ಹಾಗೂ ಎಂಟು ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದಷ್ಟು ಶೀಘ್ರವೇ ಹಣವನ್ನು ಬಿಡುಗಡೆ ಮಾಡಲಾಗುವುದು. ಹಾಗೆಯೇ ಹಳೆಯ ಕಟ್ಟಡವನ್ನು ನವೀಕರಣ ಮಾಡಲಾಗುವುದು ಎಂದರು.

ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲು ಈಗಾಗಲೇ ₹5 ಕೋಟಿ ಮೊತ್ತವನ್ನು ಶಾಲೆಗೆ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ಶಾಲೆಗಳಲ್ಲಿ ಒಂದಾಗಿರುವ ಈ ಶಾಲೆಯ ನವೀಕರಣವನ್ನು ಸಮಗ್ರವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.