ADVERTISEMENT

ಮಂಡ್ಯ | ಬಿರುಗಾಳಿ ಮಳೆ, ನೆಲಕ್ಕುರುಳಿ 20 ಕೊಕ್ಕರೆ ಮರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 12:42 IST
Last Updated 24 ಏಪ್ರಿಲ್ 2020, 12:42 IST
ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ  ನೆಲಕ್ಕುರುಳಿ ಮೃತಪಟ್ಟಿರುವ ಕೊಕ್ಕರೆಗಳು
ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ  ನೆಲಕ್ಕುರುಳಿ ಮೃತಪಟ್ಟಿರುವ ಕೊಕ್ಕರೆಗಳು   

ಮಂಡ್ಯ: ಜಿಲ್ಲೆಯ ವಿವಿಧೆಗೆ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮದ್ದೂರು ತಾಲ್ಲೂಕು ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಬಿರುಗಾಳಿಯಿಂದ ನೆಲಕ್ಕುರುಳಿ 20 ಕೊಕ್ಕರೆ ಮರಿಗಳು ಮೃತಪಟ್ಟಿವೆ.

ರಾತ್ರಿ 10.30ರ ಸಮಯದಲ್ಲಿ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿಯೊಂದಿಗೆ ಸುರಿಯಿತು. ಕೊಕ್ಕರೆಬೆಳ್ಳೂರು ಗ್ರಾಮದ ಅರಳಿಮರ, ಸುಜ್ಜಲಿ ಮರದಲ್ಲಿ ಗೂಡು ಕಟ್ಟಿಕೊಂಡಿದ್ದ 80ಕ್ಕೂ ಹೆಚ್ಚು ಕೊಕ್ಕರೆಗಳು ನೆಲಕ್ಕುರುಳಿದವು. ನೆಲಕ್ಕೆ ಬಿದ್ದ ರಭಸಕ್ಕೆ 20 ಕೊಕ್ಕರೆ ಮರಿಗಳು ಸ್ಥಳದಲ್ಲೇ ಮೃತಪಟ್ಟವು.

ರೆಂಬೆ–ಕೊಂಬೆಗಳೂ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಕೊಕ್ಕರೆಗೂಡು ನಾಶವಾಗಿವೆ. ಹಲವು ಕೊಕ್ಕರೆಮರಿಗಳು ಗಾಯಗೊಂಡಿದ್ದು ಗ್ರಾಮದ ಪಕ್ಷಿಪಾಲನಾ ಕೇಂದ್ರದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ. ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ. ಲಿಂಗೇಗೌಡ ಕೊಕ್ಕರೆಗಳನ್ನು ಆರೈಕೆ ಮಾಡುತ್ತಿದ್ದಾರೆ.

ADVERTISEMENT

‘6 ವಾರದ ಕೊಕ್ಕರೆಮರಿಗಳು ಮೃತಪಟ್ಟಿವೆ. ಗಾಯಗೊಂಡ ಮರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪಶುವೈದ್ಯ ಡಾ. ಸತೀಶ್‌ ಹೇಳಿದರು.

₹ 10 ಲಕ್ಷ ಮೌಲ್ಯದ ಬಾಳೆ ನಾಶ: ಬಿರುಗಾಳಿ ಮಳೆಗೆ ಮದ್ದೂರು ತಾಲ್ಲೂಕು ಅರೆತಿಪ್ಪೂರು ಗ್ರಾಮದ ರೈತ ಮನೋಹರ್‌ ಗೌಡ ಅವರ ಬಾಳೆ ತೋಟ ನಾಶವಾಗಿದೆ. 5 ಎಕರೆಯಲ್ಲಿ ₹ 10 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಮಂಡ್ಯ ನಗರ ಸೇರಿ ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಕೆ.ಆರ್‌.ಪೇಟೆಯಲ್ಲಿ ಸಾಧಾರಣ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.