ADVERTISEMENT

ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ

ಬಲ್ಲೇನಹಳ್ಳಿ ಮಂಜುನಾಥ
Published 21 ಜನವರಿ 2026, 4:42 IST
Last Updated 21 ಜನವರಿ 2026, 4:42 IST
ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯಲ್ಲಿ ಈಗ ದನಗಳ ಜಾತ್ರೆ ಮೇಳೈಸಿದ್ದು ಹಳ್ಳಿಕಾರ್, ಅಮೃತ ಮಹಲ್ ಮತ್ತು ದೇಶಿ ತಳಿಗಳು ಮೇಳೈಸಿದೆ
ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯಲ್ಲಿ ಈಗ ದನಗಳ ಜಾತ್ರೆ ಮೇಳೈಸಿದ್ದು ಹಳ್ಳಿಕಾರ್, ಅಮೃತ ಮಹಲ್ ಮತ್ತು ದೇಶಿ ತಳಿಗಳು ಮೇಳೈಸಿದೆ   

ಕೆ.ಆರ್.ಪೇಟೆ: ತಾಲ್ಲೂಕು ಕೇಂದ್ರದಿಂದ ಹತ್ತು ಕಿ.ಮೀ. ದೂರದಲ್ಲಿ ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿಯಲ್ಲಿ ಈಗ ದನಗಳ ಜಾತ್ರೆ ಮೇಳೈಸಿದೆ. ಸಾವಿರಾರು ಸಂಖ್ಯೆಯಲ್ಲಿ ಹಳ್ಳಿಕಾರ್, ಅಮೃತಮಹಲ್ ತಳಿ, ದೇಸಿ ತಳಿ ಸೇರಿದಂತೆ ವಿವಿಧ ಬಗೆಯ ದನಗಳು ಜಾತ್ರಾಮಾಳದಲ್ಲಿ ಬೀಡು ಬಿಟ್ಟಿದ್ದು ರಾಸುಗಳು ಮತ್ತು ರೈತರು–ವ್ಯಾಪಾರಸ್ಥರಿಂದ ಹೇಮಗಿರಿ ಬೆಟ್ಟ ತುಂಬಿ ಹೋಗಿದ್ದು ಜನಾಕರ್ಷಣೆಯ ತಾಣವಾಗಿದೆ.

‘ಹೇಮೆ’ ಎಂದರೆ ಚಿನ್ನ ಎಂಬರ್ಥ ಬರುತ್ತದೆ. ಚಿನ್ನದ ನಿಕ್ಷೇಪಗಳು ದೊರೆಯುತ್ತವೆಂದು ಸಂಶೋಧನೆಗೆ ಒಳಗಾಗಿದ್ದ ಈ ಪ್ರದೇಶ ದನಗಳ ಜಾತ್ರೆಯಿಂದ ಶತ-ಶತಮಾನಗಳಿಂದ ಹೆಸರಾಗಿದೆ. ಆಚಾರ್ಯರಾದ ವ್ಯಾಸರಾಜರು ಇಲ್ಲಿ ದನಗಳ ಜಾತ್ರೆಯನ್ನು ಆರಂಭಿಸಿದರೆಂದು ಪ್ರತೀತಿ ಇದೆ. ಜಾತ್ರೆ ಆರಂಭವಾಗಿ ಶತ - ಶತಮಾನಗಳು ಕಳೆದರೂ ಇಲ್ಲಿನ ದನಗಳ ಜಾತ್ರೆಗಾಗಲಿ ಪ್ರತಿವರ್ಷ ರಥಸಪ್ತಮಿಯಂದು ನಡೆಯುವ ಇಲ್ಲಿನ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ದೂರ ದೂರದಿಂದ ರೈತರು ಭಕ್ತರು ಬಂದು ಭಾಗವಹಿಸುವುದು ವಾಡಿಕೆಯಾಗಿದೆ.

ಮಂಡ್ಯ ,ಮೈಸೂರು ಮತ್ತು ಹಾಸನ ,ತುಮಕೂರು ಜಿಲ್ಲೆಗಳ ರೈತರು ಮತ್ತು ಅವರ ರಾಸುಗಳು ಆಗಮಿಸಿರುವುದಲ್ಲದೆ ಉತ್ತರ ಕರ್ನಾಟಕದ ರೈತರು ರಾಸುಗಳ ಖರೀದಿಗೆ ಆಗಮಿಸಿದ್ದು ದನಗಳ ವ್ಯಾಪಾರ ಜೋರಾಗಿದೆ. ಶಾಸಕ ಎಚ್.ಟಿ.ಮಂಜು ಕುಟುಂಬ ಸೇರಿದಂತೆ ನೂರಾರು ರೈತರು ತಮ್ಮ ರಾಸುಗಳನ್ನು ಕಟ್ಟಿದ್ದು ₹50 ಸಾವಿರದಿಂದ ₹12 ಲಕ್ಷದವರೆಗೂ ಬೆಲೆ ಬಾಳುವ ದನಗಳಿರುವುದು ವಿಶೇಷವಾಗಿದೆ.

ADVERTISEMENT

ರೈತ ಬೋರೇಗೌಡ ಹೇಳುವಂತೆ, ‘ದನಗಳು ವ್ಯಾಪಾರವಾಗಲಿ ಬಿಡಲಿ ಪ್ರತಿ ವರ್ಷ ಜಾತ್ರೆಗೆ ಬಂದು ದನಕಟ್ಟುವುದು ವಾಡಿಕೆಯಾಗಿದೆ.

‘ವ್ಯಾಪಾರ ನಮ್ಮ ಉದ್ದೇಶವಲ್ಲ. ವರ್ಷವೆಲ್ಲಾ ದನಗಳು ನಮಗಾಗಿ ದುಡಿಯುತ್ತವೆ. ಜಾತ್ರೆಯ ಸಮಯದಲ್ಲಿ ಮೂರ್ನಾಲ್ಕು ಜಾತ್ರೆ ಹೋಗಿ ಬಂದರೆ ಅವಕ್ಕೂ ಸ್ಥಳ ಬದಲಾವಣೆಯಾಗುತ್ತದೆ’ ಎನ್ನುತ್ತಾರೆ ರೈತ ಕರೀಗೌಡ.

‘ಈ ಬಾರಿ ಬ್ರಹ್ಮ ರಥೋತ್ಸವ ಜ.25ರಂದು ನಡೆಯಲಿದ್ದು ಅಲ್ಲಿಯವರೆಗೆ ದನಗಳು ಜಾತ್ರಾ ಮಾಳದಲ್ಲಿ ಉಳಿಯಬೇಕೆಂಬ ಆಲೋಚನೆಯಿಂದ ತಾಲ್ಲೂಕು ಆಡಳಿತ ರೈತರಿಗೆ ಮತ್ತು ರಾಸುಗಳಿಗೆ ಅನುಕೂಲಗಳನ್ನು ವಿವಿಧ ಇಲಾಖೆಗಳ ಮೂಲಕ ಕಲ್ಪಿಸಿಕೊಡಲಾಗಿದೆ.  ಪ್ರತಿನಿತ್ಯ ಹಗಲು ಮತ್ತು ಸಂಜೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಏನೇ ಸಮಸ್ಯೆ ಉಂಟಾದರೆ ಪರಿಹರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ’ ಎಂದು ಶಾಸಕ ಎಚ್.ಟಿ.ಮಂಜು ಮತ್ತು ತಹಶೀಲ್ದಾರ್ ಎಸ್.ಯು.ಅಶೋಕ್ ತಿಳಿಸಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯಲ್ಲಿ ಈಗ ದನಗಳ ಜಾತ್ರೆ ಮೇಳೈಸಿದ್ದು ಹಳ್ಳಿಕಾರ್ ಅಮೃತ ಮಹಲ್ ಮತ್ತು ದೇಸಿ ತಳಿಗಳು ಮೇಳೈಸಿದೆ
ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯಲ್ಲಿ ಈಗ ದನಗಳ ಜಾತ್ರೆ ಮೇಳೈಸಿದ್ದು ಹಳ್ಳಿಕಾರ್ ಅಮೃತ ಮಹಲ್ ಮತ್ತು ದೇಸಿ ತಳಿಗಳು ಮೇಳೈಸಿದೆ
ಕಲ್ಯಾಣ ವೆಂಕಟರಮಣಸ್ವಾಮಿ

ಬ್ರಹ್ಮ ರಥೋತ್ಸವ ಜ.25ರಂದು ₹50 ಸಾವಿರದಿಂದ ₹12 ಲಕ್ಷ ಬೆಲೆ ಬಾಳುವ ರಾಸುಗಳಿರುವುದು ವಿಶೇಷ  ದನಗಳ ಮಾಳದಲ್ಲಿ ರೈತರಿಗೆ ಮತ್ತು ರಾಸುಗಳಿಗೆ ಅನುಕೂಲ

ರಥಸಪ್ತಮಿಯಂದು ಬ್ರಹ್ಮರಥೋತ್ಸವ ‘ಇಲ್ಲಿನ ಹೇಮಗಿರಿ ಬೆಟ್ಟದ ತಪ್ಪಲಿನ ವಿಶಾಲವಾದ ಹೊಲ-ಗದ್ದೆಯೇ ದನಗಳನ್ನು ಕಟ್ಟುವ ಮೈದಾನವಾಗಿದ್ದು ಹೇಮಾವತಿ ನದಿಯು ಪಶ್ಚಿಮ ವಾಹಿನಿಯಾಗಿ ಬೆಟ್ಟದ ಪಾದದಲ್ಲಿಯೇ ಹರಿಯುವುದರಿಂದ ಧಾರ್ಮಿಕವಾಗಿಯೂ ಈ ಕ್ಷೇತ್ರ ಮಹತ್ವ ಪಡೆದಿದೆ. ಇಲ್ಲಿ ಭೃಗು ಮಹರ್ಷಿಯ ತಪಸ್ಸು ಮಾಡಿದ ಗಾಯತ್ರಿ ಶಿಲೆ ಅವರು ಇದ್ದ ಗುಹೆಗಳನ್ನು ನೋಡಬಹುದಾಗಿದೆ. ಭೃಗು ಮಹರ್ಷಿಗಳು ಹೇಮಾವತಿ ನದಿಯ ಮಧ್ಯದಲ್ಲಿರುವ ಶಿಲೆಯ ಮೇಲೆ ಕುಳಿತು ಕಠಿಣವಾದ ತಪಸ್ಸನ್ನು ಮಾಡಿ ವೆಂಕಟರಮಣ ಸ್ವಾಮಿಯ ದರ್ಶನವನ್ನು ಸಾಕ್ಷತ್ಕರಿಸಿಕೊಂಡ ತಾಣವಾಗಿದೆ. ಅವರ ಕೋರಿಕೆಯಂತೆ ಶ್ರೀಮನ್ನಾನಾರಾಯಣ ಇಲ್ಲಿ ನೆಲೆಗೊಂಡನೆಂದು ಹಾಗಾಗಿ ರಥಸಪ್ತಮಿಯಂದು ಬ್ರಹ್ಮರಥೋತ್ಸವವು ನಡೆಯುತ್ತದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಬಂಡಿಹೊಳೆ ಅಜಿತ್ ಭಟ್ಟ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.