ADVERTISEMENT

ಮಂಡ್ಯದ ಪಿಇಎಸ್‌ ಪದವಿ ಕಾಲೇಜು ಆವರಣದಲ್ಲಿ ಕೇಸರಿ ಶಾಲು–ಹಿಜಾಬ್‌ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 8:01 IST
Last Updated 8 ಫೆಬ್ರುವರಿ 2022, 8:01 IST
ಮಂಡ್ಯದ ಪಿಇಎಸ್‌ ಪದವಿ ಕಾಲೇಜು ಆವರಣದಲ್ಲಿ ಕೇಸರಿ ಶಾಲು–ಹಿಜಾಬ್‌ ತಿಕ್ಕಾಟ
ಮಂಡ್ಯದ ಪಿಇಎಸ್‌ ಪದವಿ ಕಾಲೇಜು ಆವರಣದಲ್ಲಿ ಕೇಸರಿ ಶಾಲು–ಹಿಜಾಬ್‌ ತಿಕ್ಕಾಟ   

ಮಂಡ್ಯ: ನಗರದ ಪಿಇಎಸ್‌ ಪದವಿ ಕಾಲೇಜಿಗೆ ಮಂಗಳವಾರ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದಿದ್ದರು. ಕಾಲೇಜು ಗೇಟ್‌ನಲ್ಲೇ ಕೆಲ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಶಾಲು ವಿತರಣೆ ಮಾಡುತ್ತಿದ್ದರು. ಈ ವೇಳೆ ಬುರ್ಖಾ, ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯೊಬ್ಬರು ಸ್ಕೂಟರ್‌ನಲ್ಲಿ ಬಂದರು. ಇದನ್ನು ಕಂಡ ವಿದ್ಯಾರ್ಥಿಗಳು ಘೋಷಣೆಯನ್ನು ತೀವ್ರಗೊಳಿಸಿದರು.

ಇದರಿಂದ ಪ್ರಚೋದನೆಗೆ ಒಳಗಾದ ವಿದ್ಯಾರ್ಥಿನಿ ಸಹ ಘೋಷಣೆ ಕೂಗಿದರು. ನಂತರ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಕೂಗು ಜೋರಾಯಿತು. ವಿದ್ಯಾರ್ಥಿನಿಯೂ ಘೋಷಣೆ ಮುಂದುವರಿಸಿದರು. ‘ಬುರ್ಖಾ ತೆಗೆಯಿರಿ ಎಂದು ಹೇಳಲು ಅವರು ಯಾರು, ಅವರಿಗೆ ಏನು ಹಕ್ಕಿದೆ’ ಎಂದು ಪ್ರಶ್ನಿಸಿದರು.

ಇದರಿಂದ ಕೆರಳಿದ ವಿದ್ಯಾರ್ಥಿಗಳು ಆಕೆಯತ್ತ ನುಗ್ಗಿ ಬಂದರು. ತಕ್ಷಣವೇ ಎಚ್ಚೆತ್ತುಕೊಂಡ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳ ಗುಂಪು ತಡೆದರು, ನಂತರ ಪೊಲೀಸರು ಸ್ಥಳಕ್ಕೆ ಬಂದು ಗುಂಪು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ADVERTISEMENT

‘ಕಾಲೇಜಿನ ಹೊರಾವರಣದಲ್ಲಿ ಘಟನೆ ನಡೆದಿದೆ. ಸಮವಸ್ತ್ರ ಹೊರತುಪಡಿಸಿ ಬೇರೆ ಯಾವುದೇ ಉಡುಪು ಧರಿಸಿ ಬಂದ ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿಲ್ಲ’ ಎಂದು ಪ್ರಾಚಾರ್ಯ ಡಾ.ಜೆ.ಮಹಾದೇವ ತಿಳಿಸಿದರು.

ಪ್ರತಿಭಟನೆ: ಮಂಡ್ಯ ವಿಶ್ವವಿದ್ಯಾಲಯ, ಪಿಇಎಸ್‌ ಪದವಿ ಕಾಲೇಜು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ‘ನಾವೆಲ್ಲಾ ಒಂದು, ನಾವೆಲ್ಲಾ ಹಿಂದೂ’ ಎಂದು ಘೋಷಣೆ ಕೂಗಿದರು. ಹಿಜಾಬ್‌ ತೆಗೆಯುವವರೆಗೂ ನಾವು ಕೇಸರಿ ಶಾಲು ತೆಗೆಯುವುದಿಲ್ಲ ಎಂದು ಸವಾಲು ಹಾಕಿದರು. ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣದಲ್ಲೂ ಪ್ರತಿಭಟನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.