ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
–ಪ್ರಜಾವಾಣಿ ಚಿತ್ರ
ನಾಗಮಂಗಲ (ಮಂಡ್ಯ ಜಿಲ್ಲೆ): ‘ನಮಗೆ ಜನ್ಮ ಕೊಟ್ಟ ತಂದೆ–ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳು ದೇವರಿಗೆ ಸಮಾನರಾದವರು ಎಂಬುದನ್ನು ಸನಾತನ ಹಿಂದೂ ಧರ್ಮ ಸಾರಿ ಹೇಳುತ್ತದೆ’ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬಿ.ಜಿ.ಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸರ್ವಧರ್ಮ ಸಮ್ಮೇಳನ’ದಲ್ಲಿ ಹಿಂದೂ ಧರ್ಮದ ಕುರಿತ ಉಪನ್ಯಾಸ ನೀಡಿದರು.
‘ವಸುದೈವ ಕುಟುಂಬಕಂ’ ಎಂದರೆ ಜಗತ್ತು ಒಂದು ಕುಟುಂಬ, ವಿವಿಧ ಧರ್ಮಗಳ ಸಮನ್ವಯದಿಂದ ಎಲ್ಲರೂ ಶಾಂತಿಯುತ ಬದುಕು ನಡೆಸಬೇಕು ಎಂಬ ಆಶಯದಿಂದ ಬಾಲಗಂಗಾಧರನಾಥ ಸ್ವಾಮೀಜಿ ‘ಸರ್ವಧರ್ಮ ಸಮ್ಮೇಳನ’ ಆರಂಭಿಸಿದರು’ ಎಂದರು.
‘ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಆತ್ಮವನ್ನು ಅಸ್ತ್ರಗಳಿಂದ ಕೊಲ್ಲಲು ಸಾಧ್ಯವಿಲ್ಲ. ಹಿಂದೂ ಧರ್ಮ ಪ್ರಾರಂಭವಾಗಿದ್ದು ಪ್ರಕೃತಿಯಿಂದ. ಆ ನಿಟ್ಟಿನಲ್ಲಿ ನಮ್ಮ ಹಿಂದೂ ಧರ್ಮದ ಎಲ್ಲಾ ಆರಾಧನೆಗಳು ಪಂಚಭೂತಗಳಿಂದ ಆಗಿದೆ. ನಾವು ಮಾಡುವು ಆಚಾರ ವಿಚಾರಗಳನ್ನೇ ಧರ್ಮ ಎಂದು ಕರೆಯಲಾಗುತ್ತದೆ’ ಎಂದು ಪ್ರತಿಪಾದಿಸಿದರು.
ಬೆಂಗಳೂರಿನ ಮಹಾಬೋಧಿ ಸಂಶೋಧನಾ ಕೇಂದ್ರದ ಮಾರ್ಗದರ್ಶಕ ರಾಜೇಂದ್ರ ಸುಪನ್ಯೋ ಮಾತನಾಡಿ, ‘ವಸುದೈವ ಕುಟುಂಬದಲ್ಲಿ ಅರಳಿದ ಕಮಲ ಬುದ್ಧ. ಯಾರು ಕತ್ತಲಿನಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುತ್ತಾರೋ ಅವರೇ ಬುದ್ಧರು’ ಎಂದರು.
ಜೈನ ಧರ್ಮದ ಕುರಿತು ಶ್ರವಣಬೆಳಗೊಳ ದಿಗಂಬರ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ರೈಸ್ತ ಧರ್ಮದ ಕುರಿತು ರೆವರೆಂಡ್ ಫಾದರ್ ಸ್ಟ್ಯಾನಿ ಡಿಸೋಜಾ ಮತ್ತು ಇಸ್ಲಾಂ ಧರ್ಮದ ಬಗ್ಗೆ, ಉಡುಪಿಯ ಉಪನ್ಯಾಸಕ ಮಹಮದ್ ಸಾದ್ವಿಕ್ ಧರ್ಮಗಳ ಸಾರವನ್ನು ತಿಳಿಸಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪುರುಷೋತ್ತಮಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಶೇಖರನಾಥ ಸ್ವಾಮೀಜಿ, ಸತ್ಕೀರ್ತಿನಾಥ ಮತ್ತು ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.