ಕೆ.ಆರ್.ಪೇಟೆ: ‘ಎಚ್.ಎಂ.ಟಿ ಕಾರ್ಖಾನೆ ಪುನಃಶ್ಚೇತನಕ್ಕೆ ಮುಂದಾಗಿರುವ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಇಲ್ಲ ಸಲ್ಲದ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆ ಖಂಡನೀಯ’ ಎಂದು ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಉಸ್ತುವಾರಿಗಳು ಯಾವುದೇ ವಿಚಾರವನ್ನು ಆಲೋಚಿಸಿ ಮಾತನಾಡಬೇಕು. ಕೇಂದ್ರ ಸರ್ಕಾರದ ಎಲ್ಲಾ ಒಳ್ಳೆ ಕಾರ್ಯಗಳನ್ನು ಟೀಕಿಸುವ ಒಂದೇ ಉದ್ದೇಶ ಅವರಿಗೆ ಇದ್ದಂತಿದೆ’ ಎಂದರು.
‘ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಕುಮಾರಸ್ವಾಮಿ ಅವರು ಎಚ್.ಎಂ.ಟಿ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು ಮುಂದಾಗಿದ್ದಾರೆ. ರಾಜ್ಯದ ಜನರಿಗೆ ಅನುಕೂಲವಾಗುವ ಈ ಯೋಜನೆಗೆ ರಾಜ್ಯ ಸರ್ಕಾರ ಬೆಂಬಲ ನೀಡಬೇಕು. ಉಸ್ತುವಾರಿ ಹೊತ್ತವರು ಸ್ವಾಗತಿಸಬೇಕು. ಆದರೆ, ಇದನ್ನು ಅರ್ಥ ಮಾಡಿಕೊಳ್ಳದೆ ರಿಯಲ್ ಎಸ್ಟೇಟ್ ಉದ್ದೇಶದಿಂದ ಕಾರ್ಖಾನೆಯನ್ನು ಪುನಶ್ಚೇತನ ಮಾಡಲು ಹೊರಟಿದ್ದಾರೆ ಎಂದು ಸುರ್ಜೆವಾಲಾ ಅವರು ಟೀಕಿಸಿರುವದು ಖಂಡನೀಯ’ ಎಂದರು.
ಅನುದಾನದಲ್ಲಿ ತಾರತಮ್ಯ ಬೇಡ: ‘ರಾಜ್ಯ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ಕೊಟ್ಟು, ವಿಪಕ್ಷದವರಿಗೆ ₹25 ಕೋಟಿ ಕೊಡುತ್ತಾರೆಂದು ತಿಳಿದುಬಂದಿದೆ. ಈ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕೊಡುವದಾದರೆ ಎಲ್ಲರಿಗೂ ಒಂದೇ ರೀತಿಯ ಅನುದಾನ ನೀಡಲಿ. ಶಾಸಕರಲ್ಲಿ ತಾರತಮ್ಯ ಮಾಡಬಾರದು’ ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಹುಲ್ಲೇಗೌಡ, ಮೋಹನ್, ತೋಟಪ್ಪ ಮಾದೇವೇಗೌಡ, ಬಲದೇವ್, ಹೊಸಹೊಳಲು ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.