’ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ
ಮಂಡ್ಯ: ಸ್ವಾತಂತ್ರ್ಯ ಯೋಧರಿಗೆ ‘ಮಾಸಿಕ ಗೌರವಧನ’ ಮತ್ತು ಅವರ ಅವಲಂಬಿತರಿಗೆ ‘ಮಾಸಾಶನ’ ಸಮರ್ಪಕವಾಗಿ ಪಾವತಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ರಾಜ್ಯದ 16 ಜಿಲ್ಲೆಗಳ ವ್ಯಾಪ್ತಿಯ 29 ಉಪವಿಭಾಗಾಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಬಾಗಲಕೋಟೆ, ಜಮಖಂಡಿ, ದೊಡ್ಡಬಳ್ಳಾಪುರ, ಬೆಳಗಾವಿ, ಬೈಲಹೊಂಗಲ, ಚಿಕ್ಕೋಡಿ, ಬಳ್ಳಾರಿ, ಹರಪನಹಳ್ಳಿ, ಹೊಸಪೇಟೆ, ಬೀದರ್, ಬಸವಕಲ್ಯಾಣ, ಮಂಗಳೂರು, ಪುತ್ತೂರು, ದಾವಣಗೆರೆ, ಹೊನ್ನಾಳಿ, ಹಾವೇರಿ, ಸವಣೂರು, ಕಲಬುರಗಿ, ಸೇಡಂ, ಕೋಲಾರ, ಕೊಪ್ಪಳ, ಮಂಡ್ಯ, ಪಾಂಡವಪುರ, ರಾಯಚೂರು, ಲಿಂಗಸುಗೂರು, ತುಮಕೂರು, ತಿಪಟೂರು, ಮಧುಗಿರಿ ಹಾಗೂ ಉಡುಪಿ ಉಪವಿಭಾಗಗಳ ಎ.ಸಿ.ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉಪಲೋಕಾಯುಕ್ತ–2 ನ್ಯಾಯಮೂರ್ತಿ ಬಿ.ವೀರಪ್ಪ ಆದೇಶಿಸಿದ್ದಾರೆ.
ಈ ನ್ಯೂನತೆ ನಿವಾರಿಸಿ, ಕೈಗೊಂಡ ಕ್ರಮಗಳ ಬಗ್ಗೆ ಪಾಲನಾ ವರದಿಯನ್ನು ಪೂರಕ ದಾಖಲೆಗಳೊಂದಿಗೆ ನವೆಂಬರ್ 26ರೊಳಗೆ ಖುದ್ದಾಗಿ ಹಾಜರಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಈ ಬಗ್ಗೆ ಮೇಲ್ವಿಚಾರಣೆ ವಹಿಸುವಂತೆ ಆದೇಶಿಸಲಾಗಿದೆ.
ಆಗಸ್ಟ್ 18ರಂದು ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟವಾದ ‘ಸ್ವಾತಂತ್ರ್ಯ ಯೋಧರಿಗೆ ಸಿಗದ ಗೌರವ ಧನ: ಸರ್ಕಾರದಿಂದ ₹4.85 ಕೋಟಿ ಬಾಕಿ’ ವಿಶೇಷ ವರದಿಯನ್ನು ಆದೇಶ ಪ್ರತಿಯಲ್ಲಿ ಪ್ರಸ್ತಾಪಿಸಿ, ದೇಶಸೇವೆ ಮಾಡಿದವರ ಕುಟುಂಬಸ್ಥರನ್ನು ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಶೋಚನೀಯ ಹಾಗೂ ಅವರ ತ್ಯಾಗಕ್ಕೆ ನಾವು ನೀಡುವ ಕೊಡುಗೆ ಇದೆಯೇ? ಎಂದು ಚಾಟಿ ಬೀಸಲಾಗಿದೆ.
ಸುಪ್ರೀಂ ಮತ್ತು ಹೈಕೋರ್ಟ್ ಆದೇಶಗಳಿದ್ದರೂ, ಸರ್ಕಾರದಿಂದ ಕಾಲಕಾಲಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವರ್ತನೆಯು ಲೋಕಾಯುಕ್ತ ಕಾಯ್ದೆಯಡಿ ಭ್ರಷ್ಟಾಚಾರ, ದುರಾಡಳಿತ ವ್ಯಾಪ್ತಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.