ADVERTISEMENT

ಕೋವಿಡ್‌ ಸಂಕಷ್ಟದಲ್ಲೂ ‘ಗೌಡಾ’ ಹಾವಳಿ!

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:54 IST
Last Updated 26 ಸೆಪ್ಟೆಂಬರ್ 2020, 2:54 IST
   

ಮಂಡ್ಯ: ಇಡೀ ದೇಶ ಕೋವಿಡ್‌ ಸಂಕಷ್ಟದಲ್ಲಿ ನಲುಗಿ ಹೋಗಿದ್ದರೂ ಕೆಲ ಸಂಘಟನೆಗಳ ಮುಖಂಡರು, ಹೋರಾಟಗಾರರು, ರಾಜಕಾರಣಿಗಳ ಹಿಂಬಾಲಕರು, ಸ್ವಾಮೀಜಿಗಳು ‘ಗೌರವ ಡಾಕ್ಟರೇಟ್‌’ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ.

ತಮಿಳುನಾಡು ಮೂಲದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವೊಂದು ಶನಿವಾರ ಮೈಸೂರಿನ ರುಚಿ ದ ಪ್ರಿನ್ಸ್‌ ಹೋಟೆಲ್‌ನಲ್ಲಿ 120ಕ್ಕೂ ಹೆಚ್ಚು ಮಂದಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುತ್ತಿದೆ. ಬೆಳಿಗ್ಗೆ 10 ಗಂಟೆಗೆ ಸಮಾರಂಭ ನಡೆಯಲಿದ್ದು ರಾಜ್ಯದ ವಿವಿಧ ಭಾಗಗಳ ಜನರು ಪದವಿ ಸ್ವೀಕಾರ ಮಾಡಲಿದ್ದಾರೆ.

ಮಂಡ್ಯದಿಂದ ರೈತಸಂಘ, ಸಮತಾ ಸೈನಿಕ ದಳ, ಅಂಬರೀಷ್‌ ಅಭಿಮಾನಿಗಳ ಸಂಘದ ಮುಖಂಡರು ಪದವಿ ಪಡೆಯುತ್ತಿದ್ದಾರೆ. ಮದರ್‌ ತೆರೇಸಾ ಹೆಸರಿನ ಅಮೆರಿಕಾ ವಿವಿಯೊಂದು ವಾರದ ಹಿಂದಷ್ಟೇ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮಂದಿಗೆ ಪದವಿ ಪ್ರದಾನ ಮಾಡಿದೆ.

ADVERTISEMENT

‘ಕಲಬುರ್ಗಿ ಕೇಂದ್ರೀಯ ವಿವಿ ಸಾಲುಮರದ ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್‌ ಘೋಷಿಸಿರುವುದು ಸಂತಸದ ವಿಚಾರ. ಆದರೆ ಕೆಲ ಖಾಸಗಿ, ಅನಧಿಕೃತ ವಿವಿಗಳು ಸಿಕ್ಕಸಿಕ್ಕವರಿಗೆ, ಹಣ ಕೊಟ್ಟವರಿಗೆ ಪದವಿ ನೀಡುವ ಮೂಲಕ ಪದವಿಯ ಗೌರವ ಹಾಳು ಮಾಡುತ್ತಿವೆ. ಸರ್ಕಾರ ಮಧ್ಯ ಪ್ರವೇಶಿಸಿ ವಿವಿಗಳ ವಿರುದ್ಧ ಕ್ರಮ ಜರುಗಿಸಬೇಕು. ನಮ್ಮ ಶೈಕ್ಷಣಿಕ ವಿವಿಗಳ ಕುಲಪತಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು’ ಎಂದು ಮಂಡ್ಯ ವಿವಿ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ.ಎಸ್‌.ಎನ್‌.ಶಂಕರೇಗೌಡ ಒತ್ತಾಯಿಸಿದರು.

ಹೈಕೋರ್ಟ್‌ನಲ್ಲಿ ಪ್ರಕರಣ: ಹಣ ಪಡೆದು ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಮದ್ದೂರಿನ ಸಿ.ಎಸ್‌.ಸುರೇಶ್‌ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ನೋಟಿಸ್‌ ನೀಡುವಂತೆ ಕೋರ್ಟ್‌ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.