ADVERTISEMENT

ಮಂಡ್ಯ | ಅಕ್ರಮ ಗಣಿಗಾರಿಕೆ; ಪ್ರಾಕೃತಿಕ ಸಂಪತ್ತಿಗೆ ಕನ್ನ

ಅನಧಿಕೃತ ಕಲ್ಲು, ಮರಳು ಗಣಿಗಾರಿಕೆ ಅವ್ಯಾಹತ: ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆಯೂ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:12 IST
Last Updated 4 ಫೆಬ್ರುವರಿ 2026, 6:12 IST
ಕಲ್ಲು ಗಣಿಗಾರಿಕೆ (ಸಂಗ್ರಹ ಚಿತ್ರ) 
ಕಲ್ಲು ಗಣಿಗಾರಿಕೆ (ಸಂಗ್ರಹ ಚಿತ್ರ)    

ಮಂಡ್ಯ: ಮೈಸೂರು ಕಂದಾಯ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಅನಧಿಕೃತ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರಾಕೃತಿಕ ಸಂಪನ್ಮೂಲವನ್ನು ಮನಬಂದಂತೆ ದೋಚಲಾಗುತ್ತಿದೆ ಎಂದು ರೈತಸಂಘದ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. 

ಅನಧಿಕೃತ ಗಣಿಗಾರಿಕೆಯಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ರಾಜಧನ ನಷ್ಟವಾಗುತ್ತಿದೆ. ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸುತ್ತಿದ್ದರೂ ಈ ‘ಹಗಲು ದರೋಡೆ’ಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ರೈತಸಂಘ, ದಸಂಸ ಹಾಗೂ ಪ್ರಗತಿಪರ ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿವೆ. 

ಪ್ರಕರಣಗಳ ಸಂಖ್ಯೆ ಏರಿಕೆ: 

ADVERTISEMENT

ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಈ ನಾಲ್ಕು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅಕ್ರಮ ಕಲ್ಲು ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನುಗಳಿಗೆ ಸಂಬಂಧಿಸಿ 2023–24ರಲ್ಲಿ 706, 2024–25ರಲ್ಲಿ 916 ಹಾಗೂ 2025–26ನೇ ಸಾಲಿನಲ್ಲಿ ಡಿಸೆಂಬರ್‌ ಅಂತ್ಯದವರೆಗೆ 557 ಪ್ರಕರಣಗಳು ಪತ್ತೆಯಾಗಿವೆ. 

ಕಳೆದ 3 ವರ್ಷಗಳಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ₹90.23 ಲಕ್ಷ ದಂಡ, ಅಕ್ರಮ ಸಾಗಾಣಿಕೆಗೆ ₹7.25 ಕೋಟಿ ದಂಡ ಹಾಗೂ ಅನಧಿಕೃತ ದಾಸ್ತಾನಿಗೆ ಸಂಬಂಧಿಸಿ ₹47.12 ಲಕ್ಷ ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಕಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಜಕ್ಕನಹಳ್ಳಿ, ಗಣಂಗೂರು, ಕಾಳೇನಹಳ್ಳಿ, ಮುಂಡುಗದೊರೆ ಸೇರಿ ಹಲವು ಗ್ರಾಮಗಳ ಬಳಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ದಾಳಿ ನಡೆಸಿದರೆ, ಎರಡು ದಿನ ಗಣಿಗಾರಿಕೆ ಸ್ಥಗಿತಗೊಂಡು, ಮತ್ತೆ ಪುನರಾರಂಭಗೊಳ್ಳುತ್ತದೆ. ಕ್ರಷರ್‌ಗಳ ಮೊರೆತ ಸುತ್ತಮುತ್ತಲಿನ ಗ್ರಾಮಸ್ಥರ ನೆಮ್ಮದಿಯನ್ನು ಕಸಿದಿದೆ. 

ಕದ್ದುಮುಚ್ಚಿ ಮರಳು ಸಾಗಣೆ: 

ಕಟ್ಟಡಗಳ ಕಾಮಗಾರಿಗೆ ಮರಳು ಅತ್ಯಗತ್ಯವಾಗಿದೆ. ಹೀಗಾಗಿ ಮರಳು ಗಣಿ ಗುತ್ತಿಗೆಯನ್ನು ಅಧಿಕಾರಿಗಳು ನೀಡಿಲ್ಲದಿದ್ದರೂ ಕಾವೇರಿ ತೀರದಲ್ಲಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ 12 ಎಕರೆಯಲ್ಲಿ ಒಂದು ಮರಳು ಗುತ್ತಿಗೆಯನ್ನು ಅಧಿಕೃತವಾಗಿ ನೀಡಲಾಗಿದೆ. ಉಳಿದಂತೆ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಮರಳು ಗುತ್ತಿಗೆ ನೀಡಿಲ್ಲ. 

ಮರಳು ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಸಂಬಂಧಿಸಿ ಈ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ರಮವಾಗಿ 147, 107 ಹಾಗೂ 52 ಪ್ರಕರಣಗಳು ದಾಖಲಾಗಿವೆ. ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿ ₹2.85 ಲಕ್ಷ ದಂಡ, ಅಕ್ರಮ ಸಾಗಾಣಿಕೆಗೆ ₹45.87 ಲಕ್ಷ ದಂಡ ಹಾಗೂ ಅಕ್ರಮ ದಾಸ್ತಾನಿಗೆ ₹11.71 ಲಕ್ಷ ದಂಡ ಹಾಕಲಾಗಿದೆ.

ಎಸ್‌.ಎಸ್‌. ಮಲ್ಲಿಕಾರ್ಜುನ ಗಣಿ ಸಚಿವ 
ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್‌ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಜಿಯೋ ಫೆನ್ಸಿಂಗ್‌ ಅಳವಡಿಸಲು ಸೂಚಿಸಲಾಗಿದೆ. ನಿರಂತರ ದಾಳಿ ನಡೆಸಿ ದಂಡ ಹಾಕಲಾಗುತ್ತಿದೆ
– ಎಸ್‌.ಎಸ್‌.ಮಲ್ಲಿಕಾರ್ಜುನ ಗಣಿ ಮತ್ತು ಭೂವಿಜ್ಞಾನ ಸಚಿವ

10 ಅಧಿಕಾರಿಗಳ ವಿರುದ್ಧ ‘ಸುಮೋಟೊ’

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ವಡೇರಪುರ ಸಮೀಪದ ದೊಡ್ಡಜಟಕಾ ರಸ್ತೆಯಲ್ಲಿರುವ ಅಕ್ರಮ ಕಲ್ಲು ಗಣಿಗಾರಿಕೆ ಕ್ವಾರಿಯೊಳಗೆ ಟಿಪ್ಪರ್ ವಾಹನ ಬಿದ್ದು ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ 10 ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಈಚೆಗೆ ಸ್ವಯಂಪ್ರೇರಿತ ದೂರು (ಸುಮೋಟೊ ಕೇಸ್‌) ದಾಖಲಿಸಿದ್ದಾರೆ. 

‘ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ್ದಾರೆ’ ಎಂಬ ಆರೋಪದ ಮೇರೆಗೆ ಪಾಂಡವಪುರ ಉಪವಿಭಾಗಾಧಿಕಾರಿ ನಾಗಮಂಗಲ ತಹಶೀಲ್ದಾರ್ ಡಿವೈಎಸ್ಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮತ್ತು ಹಿರಿಯ ಭೂ ವಿಜ್ಞಾನಿ ಆರ್‌ಟಿಒ ಜಿಲ್ಲಾ ಕಾರ್ಮಿಕ ಅಧಿಕಾರಿ ಕಾರ್ಮಿಕ ಇನ್ಸ್‌ಪೆಕ್ಟರ್ ತಾಲ್ಲೂಕು ಪಂಚಾಯಿತಿ ಇಒ ಮತ್ತು ಪಿಡಿಒ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.