ADVERTISEMENT

ಮಂಡ್ಯ | ಅಕ್ರಮ ರೆಸಾರ್ಟ್‌, ಹೋಂಸ್ಟೇ ತೆರವಿಗೆ ಆದೇಶ

ಕಾವೇರಿ ನದಿ ಜಾಗ ಒತ್ತುವರಿ ತೆರವುಗೊಳಿಸಿ: ಉಪಲೋಕಾಯುಕ್ತರ ಕಟ್ಟುನಿಟ್ಟಿನ ಸೂಚನೆ

ಸಿದ್ದು ಆರ್.ಜಿ.ಹಳ್ಳಿ
Published 5 ಡಿಸೆಂಬರ್ 2025, 2:54 IST
Last Updated 5 ಡಿಸೆಂಬರ್ 2025, 2:54 IST
ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ದೃಶ್ಯ 
ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ದೃಶ್ಯ    

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ನಾಲೆ ಅಣೆಕಟ್ಟೆ ಸಮೀಪದ ಕಾವೇರಿ ನದಿಯ ಬಫರ್‌ ಜೋನ್‌ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ತಲೆ ಎತ್ತಿರುವ ಅಕ್ರಮ ರೆಸಾರ್ಟ್‌, ಹೋಂಸ್ಟೇಗಳ ಕಟ್ಟಡಗಳನ್ನು ಡಿಸೆಂಬರ್‌ 30ರೊಳಗೆ ತೆರವುಗೊಳಿಸಲು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. 

ಭೂಪರಿವರ್ತನೆಯಾಗದ ಜಾಗದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ರೆಸಾರ್ಟ್‌ ಮತ್ತು ಹೋಮ್‌ಸ್ಟೇಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ಸಂಬಂಧಿತ ಇಲಾಖೆಯಿಂದ ಪರವಾನಗಿ ಪಡೆಯದೆ ವಾಣಿಜ್ಯ ಕಟ್ಟಡಗಳನ್ನು ಹೇಗೆ ಕಟ್ಟಿದ್ದಾರೆ? ಎಂದು ಚಾಟಿ ಬೀಸಿದ್ದಾರೆ. 

ಸರ್ವೆ ನಂ. 164 ರಿಂದ 178ರವರೆಗೆ ಕಾವೇರಿ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ರೆಸಾರ್ಟ್‌, ಹೋಂಸ್ಟೇಗಳು ನೀರು ಮತ್ತು ವಿದ್ಯುತ್‌ ಸಂಪರ್ಕ ಪಡೆದುಕೊಂಡು ಕಾನೂನುಬಾಹಿರವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿವೆ. ಟ್ರೇಡ್‌ ಲೈಸೆನ್ಸ್‌ ಮತ್ತು ಸಂಬಂಧಿತ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲದಿದ್ದರೂ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮತ್ತು ಆಘಾತ ತಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. 

ADVERTISEMENT

ಕಂದಾಯ, ಕಾವೇರಿ ನೀರಾವರಿ ನಿಗಮ, ಪ್ರವಾಸೋದ್ಯಮ ಇಲಾಖೆ, ಭೂಮಾಪನ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮತ್ತು ಕಾನೂನುಬದ್ಧವಾಗಿ ನಿರ್ವಹಿಸಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿರುವ ಬಗ್ಗೆ ಸಮರ್ಪಕವಾದ ವರದಿ ನೀಡಿಲ್ಲ ಎಂದು ಉಪಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸಮಗ್ರ ವರದಿಗೆ ಆದೇಶ: 

ನ.27ರಂದು ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶ್ರೀನಿವಾಸ್‌, ಶ್ರೀರಂಗಪಟ್ಟಣ ತಹಶೀಲ್ದಾರ್‌ ಚೇತನಾ ಯಾದವ್‌  ಅವರು ನೀಡಿದ ಅಪೂರ್ಣ ವರದಿ ಬಗ್ಗೆಯೂ ಉಪಲೋಕಾಯುಕ್ತರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾವೇರಿ ನದಿಯ ರಕ್ಷಣೆಗಾಗಿ ಬಫರ್‌ ಜೋನ್‌ ವಲಯವನ್ನು ಗುರುತಿಸಬೇಕು ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಅಕ್ರಮ ಕಟ್ಟಡಗಳ ತೆರವಿಗೆ ಕೂಡಲೇ ಕ್ರಮವಹಿಸಿ, ಡಿ.30ರಂದು ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದಾರೆ. 

ಈ ಬಗ್ಗೆ ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ಪ್ರತಿಯನ್ನು ಕಳುಹಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಬೇಕೆಂದು ಕೋರಲಾಗಿದೆ. 

ಕಾವೇರಿ ನದಿ ಜಾಗದ ಒತ್ತುವರಿ ತೆರವಿಗೆ ಉಪಲೋಕಾಯುಕ್ತರು ನಿರ್ದೇಶನ ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಆದೇಶವನ್ನು ಪಾಲಿಸುತ್ತೇವೆ
ಕುಮಾರ ಜಿಲ್ಲಾಧಿಕಾರಿ ಮಂಡ್ಯ

ಕಾಟಾಚಾರದ ಕಾರ್ಯಾಚರಣೆ–ಆರೋಪ

ಮೇ 26ರಿಂದ 29ರವರೆಗೆ ಉಪಲೋಕಾಯುಕ್ತ–2 ನ್ಯಾಯಮೂರ್ತಿ ಬಿ.ವೀರಪ್ಪ ಅವರ ತಂಡ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭ ಕಾವೇರಿ ನದಿ ಜಾಗ ಒತ್ತುವರಿ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಇದನ್ನು ಆಧರಿಸಿ ಜೂನ್‌ 10ರಂದು ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು.  ತಹಶೀಲ್ದಾರ್‌ ಚೇತನಾ ಯಾದವ್ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಅ.8 ಮತ್ತು 9ರಂದು ಎರಡು ದಿನ ಕಾವೇರಿ ನದಿ ಖರಾಬು ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಆದರೆ ರಾಜಕೀಯ ಮತ್ತು ಪ್ರಭಾವಿಗಳ ಒತ್ತಡದಿಂದ ತೆರವು ಕಾರ್ಯಾಚರಣೆ ಅರ್ಧಕ್ಕೆ ಮೊಟಕುಗೊಂಡಿತು ಎಂಬ ಆರೋಪಗಳು ಕೇಳಿಬಂದಿವೆ. 

‘ನದಿಯ ಹರಿವನ್ನೇ ಬದಲಿಸಿದ ತಡೆಗೋಡೆ’

ಕಾವೇರಿ ನದಿಯ ಹರಿವನ್ನೇ ಬದಲಿಸಿ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ರಕ್ಷಣೆಗಾಗಿ ₹1.72 ಕೋಟಿ ವೆಚ್ಚದಲ್ಲಿ 255 ಮೀಟರ್‌ ಉದ್ದದ ತಡೆಗೋಡೆ ನಿರ್ಮಿಸಲಾಗಿದೆ. ಯಾತ್ರಿ ನಿವಾಸ ಧ್ಯಾನಮಂದಿರ ಮತ್ತು ಮೂಲಸೌಕರ್ಯ ಸೇರಿದಂತೆ ಸರ್ಕಾರ ಒಟ್ಟು ₹4 ಕೋಟಿ ಖರ್ಚು ಮಾಡಿದೆ. ಅಷ್ಟೇ ಅಲ್ಲದೆ ಶ್ರೀರಂಗಪಟ್ಟಣದ ತಹಶೀಲ್ದಾರ್‌ ಚೇತನಾ ಯಾದವ್‌ ಅವರು ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಶಾಶ್ವತವಾಗಿ ಭೂಮಿ ನೀಡಲು ಉಪವಿಭಾಗಾಧಿಕಾರಿಗೆ ಶಿಫಾರಸು ಮಾಡಿರುವ ಬಗ್ಗೆಯೂ ಉಪಲೋಕಾಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬದವರಿಗೆ ಜಮೀನು ಅಥವಾ ನಿವೇಶನ ನೀಡಲು ನಿರಾಸಕ್ತಿ ತೋರುವ ಅಧಿಕಾರಿಗಳು ಖಾಸಗಿ ಸಂಸ್ಥೆಗಳಿಗೆ ಭೂಮಿ ನೀಡಲು ಉತ್ಸುಕತೆ ತೋರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.