ADVERTISEMENT

ಶ್ರೀರಂಗಪಟ್ಟಣ: ಜಲ್ಲಿ ಕ್ರಷರ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹ

ತಾಲ್ಲೂಕಿನ ವಿವಿಧೆಡೆ ಕಲ್ಲು ಅಕ್ರಮ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:24 IST
Last Updated 2 ಸೆಪ್ಟೆಂಬರ್ 2025, 2:24 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ, ಮುಂಡುಗದೊರೆ, ಹಂಗರಹಳ್ಳಿ ಇತರ ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳು ನಡೆಯುತ್ತಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಸೋಮವಾರ ತಹಶೀಲ್ದಾರ್‌ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ, ಮುಂಡುಗದೊರೆ, ಹಂಗರಹಳ್ಳಿ ಇತರ ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳು ನಡೆಯುತ್ತಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಸೋಮವಾರ ತಹಶೀಲ್ದಾರ್‌ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿದರು   

ಶ್ರೀರಂಗಪಟ್ಟಣ: ‘ತಾಲ್ಲೂಕಿನ ಕಾಳೇನಹಳ್ಳಿ, ಮುಂಡುಗದೊರೆ, ಹಂಗರಹಳ್ಳಿ, ನಿಲನಕೊಪ್ಪಲು, ಜಕ್ಕನಹಳ್ಳಿ, ಚನ್ನನಕೆರೆ ಇತರೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳು ನಡೆಯುತ್ತಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದರು. ತಹಶೀಲ್ದಾರ್‌ ಚೇತನಾ ಯಾದವ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ತಾಲ್ಲೂಕಿನಲ್ಲಿ 40ಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. 18 ಜಲ್ಲಿ ಕ್ರಷರ್‌ಗಳು ಅಕ್ರಮವಾಗಿವೆ. ಕೆಲವು ದಿನಗಳ ಹಿಂದೆ ಟಾಸ್ಕ್ ಪೋರ್ಸ್‌ ಸಮಿತಿ ದಾಳಿ ನಡೆಸಿ ಕೆಲವು ಕಲ್ಲು ಗಣಿ ಮತ್ತು ಜಲ್ಲಿ ಕ್ರಷರ್‌ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ. ಉಳಿದ ಕಡೆ ನಡೆಯುತ್ತಿರುವ ಅಕ್ರಮವನ್ನೂ ತಡೆಯಬೇಕು. ಸರ್ಕಾರಕ್ಕೆ ಹತ್ತಾರು ಕೋಟಿ ರೂಪಾಯಿ ರಾಜಧನ ನಷ್ಟವಾಗಿದ್ದು, ವಸೂಲಿ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ ಆಗ್ರಹಿಸಿದರು.

‘ಬಡವರಿಗೆ ಸರ್ಕಾರ ದರಖಾಸ್ತು ಮೂಲಕ ಮಂಜೂರು ಮಾಡಿರುವ ಕೃಷಿ ಜಮೀನನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಚನ್ನನಕೆರೆ, ಗಣಂಗೂರು, ಕಾಳೇನಹಳ್ಳಿ, ನೀಲನಕೊಪ್ಪಲು, ಗೌಡಹಳ್ಳಿ, ಸಿದ್ದಾಪುರ, ಹಂಗರಹಳ್ಳಿ ವ್ಯಾಪ್ತಿಯಲ್ಲಿ ರೈತರಿಗೆ ಮಂಜೂರಾಗಿರುವ 120 ಎಕರೆಗೂ ಹೆಚ್ಚು ದರಖಾಸ್ತು ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅಂತಹ ಜಮೀನುಗಳ ದರಖಾಸ್ತು ಮಂಜೂರಾತಿಯನ್ನು ರದ್ದುಪಡಿಸಬೇಕು. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನೂ ತಡೆಯಬೇಕು. ಕಾಳೇನಹಳ್ಳಿ ಬಳಿ ಸಾರ್ವಜನಿಕ ಕೆರೆಯ ಅಂಗಳದಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರ್‌ ತೆರವು ಮಾಡಿಸಿ ಕೆರೆಯನ್ನು ಉಳಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ. ನಾಗೇಂದ್ರಸ್ವಾಮಿ ಒತ್ತಾಯಿಸಿದರು.

ADVERTISEMENT

ಅಹವಾಲು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಚೇತನಾ ಯಾದವ್‌, ‘ಟಾಸ್ಕ್ ಪೋರ್ಸ್‌ ಸಮಿತಿ ಸಭೆ ನಡೆಸಿ ಅಕ್ರಮ ತಡೆಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು. ರೈತ ಮುಖಂಡ ಡಿ.ಎಸ್‌. ಚಂದ್ರಶೇಖರ್‌, ತೇಜಸ್, ಮಹೇಶ್, ತಮ್ಮೇಗೌಡ, ದೀಪು, ಶಂಕರ್‌ ಇದ್ದರು.

ಚನ್ನನಕೆರೆ ಮತ್ತು ಕಾಳೇನಹಳ್ಳಿ ಸಮೀಪ ವಿಶ್ವೇಶ್ವರಯ್ಯ ಸಂಪರ್ಕ ನಾಲೆಯ 1.3 ಕಿ.ಮೀ. ಸುರಂಗ ಇದ್ದು ಕಲ್ಲು ಗಣಿಗಾರಿಕೆಯಿಂದ ಈ ಸುರಂಗ ಕುಸಿಯುವ ಆತಂಕ ಎದುರಾಗಿದೆ
ಗಂಜಾಂ ರವಿಚಂದ್ರ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.