ADVERTISEMENT

ಪಾಂಡವಪುರ | ಟಿಎಂಪಿಸಿಎಂಎಸ್ ಅವ್ಯವಹಾರ: ಕಿಡಿಕಾರಿದ ಷೇರುದಾರರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 14:18 IST
Last Updated 20 ಸೆಪ್ಟೆಂಬರ್ 2024, 14:18 IST
ಪಾಂಡವಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಷೇರುದಾರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪಾಂಡವಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಷೇರುದಾರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.   

ಪಾಂಡವಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರ, ಹಣ ವಸೂಲಾತಿ, ಆಡಳಿತ ನಿರ್ವಹಣೆಯ ವೈಫಲ್ಯ ವಿಚಾರಗಳಿಗೆ ಸಂಬಂಧಿಸಿಂದತೆ ಷೇರುದಾರ ಸದಸ್ಯರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆಯಿತು.

ಪಟ್ಟಣದ ಟಿಎಪಿಎಂಎಸ್ ರೈತ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2023–24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಷೇರುದಾರರು ಸಂಘದ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕಲ್ಯಾಣ ಮಂಟಪ, ಅಕ್ಕಿಗಿರಣಿ, ಪೆಟ್ರೋಲ್ ಬಂಕ್, ಬಟ್ಟೆ ಶಾಖೆ, ಬ್ಯಾಂಕ್ ಎಲ್ಲಾ ಕಡೆ ಸಂಸ್ಥೆಯ ನೌಕರರು ಅವ್ಯವಹಾರ ನಡೆಸಿದ್ದಾರೆ. ಇದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಮಂಡಳಿಯವರಿಗೆ ಈ ವಿಚಾರ ಗೊತ್ತಿಲ್ಲ ಎಂದರೆ ಯಾವ ರೀತಿ ಆಡಳಿತ ನಡೆಯುತ್ತಿದೆ. ಒಂದು ವರ್ಷದ ಬಳಿಕ ಬಡ್ಡಿ ಸಮೇತ ಹಣ ವಸೂಲಿ ಮಾಡಲಾಗಿದೆ ಎಂದು ಈಗ ಉತ್ತರ ನೀಡಲಾಗುತ್ತಿದೆ. ಹಣ ಸಂಸ್ಥೆಯ ಖಾತೆಗೆ ಜಮಾ ಆಗದೆ ಮುಂದಿನ ಖರೀದಿಗೆ ಡಿಮ್ಯಾಂಡ್ ಡ್ರಾಪ್ಟ್ ನೀಡಿದಾದ್ದರೂ ಏಕೆ’ ಎಂದು ಷೇರುದಾರ ಸದಸ್ಯರಾದ ಪರಮೇಶ್, ಬಾಲಗಂಗಾಧರ್, ಹಾರೋಹಳ್ಳಿ ಶ್ರೀಧರ, ವಕೀಲ ಮುರುಳಿ, ಜನಾರ್ಧನ, ಸಿ.ಎಂ.ಮಹೇಶ್, ಹಿರೇಮರಳಿ ರವಿಕುಮಾರ್ ಪ್ರಶ್ನಿಸಿದರು.

ADVERTISEMENT

ಷೇರುದಾರ ಬಾಲಗಂಗಾಧರ ಮಾತನಾಡಿ, ‘ಅವ್ಯವಹಾರಗಳನ್ನು ಪತ್ತೆ ಹಚ್ಚಲು ಷೇರುದಾರರನ್ನೊಳಗೊಂಡತೆ ಒಂದು ಸಮಿತಿ ಮಾಡಿ ಎಂದು ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಇದು ಕಾರ್ಯಗತವಾಗಿಲ್ಲ. ಪಕ್ಷಾತೀತವಾಗಿ ಎಲ್ಲರನ್ನೂ ಸೇರಿಸಿಕೊಂಡು ಒಂದು ಸಮಿತಿ ರಚಿಸಿ ಅವ್ಯವಹಾರಗಳನ್ನು ಪತ್ತೆ ಹಚ್ಚಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ‘ಷೇರುದಾರರನ್ನು ಸೇರಿಸಿಕೊಂಡರೆ ಅವರೂ ಭ್ರಷ್ಟರಾಗಬಹುದು. ಹೀಗಾಗಿ ಆಡಳಿತ ಮಂಡಳಿ ನಿರ್ದೇಶಕರೇ ಒಂದು ಸಮಿತಿ ರಚಿಸಿಕೊಳ್ಳಲಿ’ ಎಂದು ಸಲಹೆ ನೀಡಿದರು.

‘ಸಂಸ್ಥೆಗೆ ಸೇರಿದ ಪೆಟ್ರೋಲ್ ಬಂಕ್‌ನಲ್ಲಿ ₹8.23 ಕೋಟಿ ವಹಿವಾಟು ನಡೆಸಿ ಕೇವಲ ₹93 ಸಾವಿರ ಲಾಭ ಬಂದಿದೆ. ಬಂಡವಾಳಕ್ಕೆ ತಕ್ಕಂತೆ ಲಾಭ ಬಂದಿಲ್ಲ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಲಾಭದಲ್ಲಿ ಅಜಗಜಾಂತರ ವ್ಯತ್ಯಾಸ ಬರಲು ಕಾರಣವೇನು’ ಎಂದು ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷ ಡಿ.ಶ್ರೀನಿವಾಸ್ ಷೇರುದಾರರ ಪ್ರಶ್ನಿಗಳಿಗೆ ಉತ್ತರಿಸಿ, ‘ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಸಣ್ಣ-ಪುಟ್ಟ ತಪ್ಪುಗಳು ನಡೆದಿರುಬಹುದು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಮದುವೆಗೆ ₹ಸಾವಿರ ರಿಯಾಯಿತಿ ನೀಡುತ್ತೇವೆ. ಅದೇ ರೀತಿ ಮರಣ ನಿಧಿ ಹೆಚ್ಚಳದ ಬಗ್ಗೆ ಮುಂದೆ ತೀರ್ಮಾನಿಸಲಾಗುವುದು. ಸಂಸ್ಥೆಗೆ ಬರಬೇಕಾದ ಹಣ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ’  ಎಂದು ವಿವರಣೆ ನೀಡಿದರು.

ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರುಗಳಾದ ರಾಮಕೃಷ್ಣೇಗೌಡ, ಗುರುಸ್ವಾಮಿ, ಎಸ್.ದಯಾನಂದ್, ಚಿಕ್ಕಾಡೆ ಶ್ರೀಕಾಂತ್, ಹರಳಹಳ್ಳಿ ಚಿಟ್ಟಿಬಾಬು, ತಿಬ್ಬಮ್ಮ, ಬೆಟ್ಟಸ್ವಾಮಿಗೌಡ, ಜಯಲಕ್ಷ್ಮಮ್ಮ, ಮಾಲತಿ, ಇತರರು ಇದ್ದರು.

‘ಮದುವೆಗೆ ರಿಯಾಯಿತಿ ನೀಡಿ’
ಹಾರೋಹಳ್ಳಿ ಶ್ರೀಧರ ಮಾತನಾಡಿ ‘ಇತರೆ ದುಂದು ವೆಚ್ಚ ಕಡಿಮೆ ಮಾಡಿ ಷೇರುದಾರರ ಸದಸ್ಯರ ಮಕ್ಕಳ ಮದುವೆಗೆ ಕಲ್ಯಾಣ ಮಂಟಪದಲ್ಲಿ ₹5 ಸಾವಿರ ರಿಯಾಯಿತಿ ಕೊಡಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಸಣ್ಣಪುಟ್ಟ ಸೊಸೈಟಿಗಳು ರಿಯಾಯಿತಿ ನೀಡುತ್ತಿರುವಾಗ ನೀವು ಏಕೆ ಕೊಡಬಾರದು. ಜತೆಗೆ ಮರಣ ನಿಧಿಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು. ಈ ವಿಚಾರದ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.