ADVERTISEMENT

ತವರಿಗೆ ಸಾವಿರ ಕೋಟಿ ಕೊಟ್ಟರೇ ಬಿಎಸ್‌ವೈ?

ಉಪ ಚುನಾವಣೆ: ಕೆ.ಆರ್‌.ಪೇಟೆಯಲ್ಲಿ ಕೋಟಿಯದ್ದೇ ಮಾತು; ಪುಸ್ತಕ ಹಂಚುತ್ತಿರುವ ಜೆಡಿಎಸ್‌

ಎಂ.ಎನ್.ಯೋಗೇಶ್‌
Published 9 ನವೆಂಬರ್ 2019, 19:32 IST
Last Updated 9 ನವೆಂಬರ್ 2019, 19:32 IST
ಯಡಿಯೂರಪ್ಪ
ಯಡಿಯೂರಪ್ಪ   

ಮಂಡ್ಯ: ಉಪ ಚುನಾವಣೆ ಸಮೀಪಿಸುತ್ತಿದ್ದಂತೆ, ಕೆ.ಆರ್‌.ಪೇಟೆ ಕ್ಷೇತ್ರದ ರಾಜಕೀಯ ಮುಖಂಡರು ಕೋಟಿ ಲೆಕ್ಕದ ಮಾತುಗಳನ್ನೇ ಉದುರಿಸುತ್ತಿದ್ದಾರೆ. ದಶಕಗಳಿಂದಲೂ ನನೆಗುದಿಗೆ ಬಿದ್ದ ಯೋಜನೆಗಳು ಈಗ ನಾಯಕರ ಮಂತ್ರಗಳಾಗಿವೆ.

ಬಿಜೆಪಿಯಿಂದ ಸ್ಪರ್ಧಿಸಲು ಸಕಲ ತಯಾರಿ ನಡೆಸಿಕೊಂಡಿರುವ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ, ಹಳ್ಳಿಹಳ್ಳಿಗಳಲ್ಲಿ ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಾವಿರ ಕೋಟಿ’ಯ ಕತೆ ಹೇಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ₹ 1 ಸಾವಿರ ಕೋಟಿ ಹಣ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಮೊದಲ ಹಂತದಲ್ಲಿ ₹ 212 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಉಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ.

ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಆರೋಪ ಮುಂದುವರಿಸಿರುವ ಅವರು, ‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಮನನೊಂದು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದೇನೆ. ತವರು ತಾಲ್ಲೂಕನ್ನು ಅಭಿವೃದ್ಧಿ ಮಾಡಲು ಸಂಕಲ್ಪ ಮಾಡಿರುವ ಯಡಿಯೂರಪ್ಪ ಅವರೊಂದಿಗೆ ಕೈ ಜೋಡಿಸಿದ್ದೇನೆ’ ಎನ್ನುತ್ತಿದ್ದಾರೆ.

ADVERTISEMENT

ನಾರಾಯಣಗೌಡರ ಈ ಮಾತಿನೊಂದಿಗೆ, ದಶಕದಿಂದಲೂ ನನೆಗುದಿಗೆ ಬಿದ್ದಿರುವ ಹಾಸನ ಜಿಲ್ಲೆಯ ಜನಿವಾರ ಕೆರೆಯಿಂದ ಸಂತೇಬಾಚಹಳ್ಳಿ ಹೋಬಳಿಗೆ ನೀರು ಪೂರೈಸುವ ಯೋಜನೆ, ಹೊಸಹೊಳಲು ಉನ್ನತ ಮಟ್ಟದ ಕಾಲುವೆ, ಹೇಮಾವತಿ ಎಡದಂಡೆ ನಾಲೆಗಳ ಆಧುನೀಕರಣ, ಹೇಮಗಿರಿ–ಮಂದಗೆರೆ ಅಣೆಕಟ್ಟೆಗಳ ದುರಸ್ತಿ ಯೋಜನೆಗಳು ಮುನ್ನೆಲೆಗೆ ಬಂದಿವೆ.

ಜೆಡಿಎಸ್‌ ಆಕ್ಷೇಪ: ನಾರಾಯಣಗೌಡ ಹೇಳುತ್ತಿರುವ ಸಾವಿರ ಕೋಟಿ ಕತೆಗೆ ಜೆಡಿಎಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಹೇಳಿರುವ ಯೋಜನೆಗಳಿಗೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅನುಮೋದನೆ ನೀಡದ್ದಾರೆ. ಈಗ ಅವುಗಳನ್ನು ಯಡಿಯೂರಪ್ಪ ಕೊಟ್ಟ ಯೋಜನೆಗಳು ಎಂದು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ ಎಂಬುದು ಅವರ ಆರೋಪ.

ಈ ಕುರಿತಂತೆ ಜೆಡಿಎಸ್‌ ನಾಯಕರು ಒಂದು ಪುಸ್ತಕವನ್ನೇ ಪ್ರಕಟಿಸಿದ್ದಾರೆ. ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಸುಳ್ಳು ಹೇಳುತ್ತಿದ್ದಾರೆ ಎಂದು ಅದರಲ್ಲಿ ಬಿಂಬಿಸಿದ್ದು, ಆ ಪುಸ್ತಕವನ್ನು ಕ್ಷೇತ್ರದ ಮನೆ ಮನೆಗೆ ಹಂಚುತ್ತಿದ್ದಾರೆ.

‘ನಾರಾಯಣಗೌಡರಿಗೆ ಒಂದು ಕೋಟಿಗೆ ಎಷ್ಟು ಸೊನ್ನೆ ಬರುತ್ತವೆ ಎಂಬುದೇ ಗೊತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಅವರು ಅನುಮೋದಿಸಿರುವ ಯೋಜನೆಗಳನ್ನು ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಬಸ್‌ ಕೃಷ್ಣೇಗೌಡ ಹೇಳಿದರು.

ಹಣ ಎಲ್ಲಿದೆ ತೋರಿಸಿ: ಜೆಡಿಎಸ್‌ ಹಾಗೂ ಅನರ್ಹ ಶಾಸಕನ ನಡುವಿನ ಸಾವಿರ ಕೋಟಿ ವಿಚಾರ ಗಮನಿಸುತ್ತಿರುವ ಕಾಂಗ್ರೆಸ್‌ ಮುಖಂಡರು ‘ಯಡಿಯೂರಪ್ಪ ಬಿಡುಗಡೆ ಮಾಡಿರುವ ಹಣ ಎಲ್ಲಿದೆ ತೋರಿಸಿ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಜನರು ಪ್ರಬುದ್ಧರಾಗಿದ್ದಾರೆ. ಚುನಾವಣೆಯ ಸಮಯದಲ್ಲಿ ಬಂದು ಸಾವಿರ ಕೋಟಿ ಬಗ್ಗೆ ಮಾತನಾಡಿದರೆ ಯಾರೂ ನಂಬುವುದಿಲ್ಲ. ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ಪಡೆದಿಲ್ಲ. ಹೀಗಿರುವಾಗ ಹಣ ಎಲ್ಲಿಂದ ತಂದು ಕೊಡುತ್ತಾರೆ’ ಎಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಬಿ.ಪ್ರಕಾಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.