
ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶನಿವಾರ ಜಯರಾಮ್ ರಾಯಪುರ ಮತ್ತು ಶಿಲ್ಪಾಗೌಡ ದಂಪತಿಯನ್ನು ಅಭಿನಂದಿಸಲಾಯಿತು.
ಮಂಡ್ಯ: ‘ಉನ್ನತ ಮಟ್ಟದ ಕೆಲವು ಅಧಿಕಾರಿಗಳು ಜನಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಬದಲು ರಾಜಕಾರಣಿಗಳ ಬಳಿ ಸ್ನೇಹ ಗಳಿಸಿ ಓಲೈಕೆ ಮತ್ತು ಸ್ವಹಿತ ಕಾಪಾಡಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ’ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ ಆರೋಪಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕರ್ನಾಟಕ ಸಂಘ, ಫಸ್ಟ್ ಸರ್ಕಲ್, ಜಯರಾಮ್ ರಾಯಪುರ ಅಭಿನಂದನಾ ಸಮಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆಂಧ್ರಪ್ರದೇಶದ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರಾಗಿ ನೇಮಕಗೊಂಡ ಜಯರಾಮ್ ರಾಯಪುರ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣಿಗಳ ಓಲೈಕೆಯಲ್ಲಿ ತೊಡಗಿರುವ ಅಧಿಕಾರಿಗಳ ನಡುವೆ ಜನಸೇವಕರಾಗಿ ನಮ್ಮ ಜಯರಾಮ್ ರಾಯಪುರ ಅವರು ಕಾಣುತ್ತಾರೆ. ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಪ್ರಮಾಣ ಮಾಡುವ ರೀತಿಯಲ್ಲಿ ನಡೆದುಕೊಳ್ಳುವ ಅಧಿಕಾರಿಗಳು ವಿರಳ ಎಂದರು.
ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಗುಣವಿರುವ ಜಯರಾಮ್ ರಾಯಪುರ ಅವರು ಜನಾನುರಾಗಿ. ಕರ್ತವ್ಯದ ಒತ್ತಡದ ನಡುವೆಯೂ ಸಾಹಿತಿಯಾಗಿ ಜೊತೆಗೆ ಜನಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಒಂದು ಸಾಧನೆಯೇ ಸರಿ ಎಂದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.
ಕನ್ನಡ ಪ್ರಾಧ್ಯಾಪಕಿ ಎಂ.ಕೆಂಪಮ್ಮ ಅವರು ಬರೆದಿರುವ ಜಯರಾಮ್ ರಾಯಪುರ ಅವರ ಜೀವನ ಚರಿತ್ರೆ ಕುರಿತ ‘ಪ್ರಗತಿಯ ಹರಿಕಾರ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಜಯರಾಮ್ ರಾಯಪುರ ಮತ್ತು ಶಿಲ್ಪಾಗೌಡ ದಂಪತಿಯನ್ನು ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ ಅವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಎಸ್‌ಬಿಇಟಿ ಅಧ್ಯಕ್ಷ ಬಿ.ಶಿವಲಿಂಗಯ್ಯ, ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಸ್.ಟಿ.ರಾಮಚಂದ್ರ, ಫಸ್ಟ್ ಸರ್ಕಲ್ ಅಧ್ಯಕ್ಷ ಡಿ.ಮುನಿರಾಜು, ಕೋಣನಹಳ್ಳಿ ಜಯರಾಮ್, ಚಂದ್ರಶೇಖರ್, ತಗ್ಗಹಳ್ಳಿ ವೆಂಕಟೇಶ್, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ ಭಾಗವಹಿಸಿದ್ದರು.
‘ಕೆಆರ್‌ಎಸ್ ಡ್ಯಾಂ: ನಾಲ್ವಡಿ ಕೊಡುಗೆ’
‘ಪ್ರಗತಿಯ ಹರಿಕಾರ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ‘ಕೆಆರ್‌ಎಸ್ ಅಣೆಕಟ್ಟೆ ಕಟ್ಟಿದವರ ಹೆಸರನ್ನು ಹೇಳುತ್ತಿಲ್ಲ ಬದಲಿಗೆ ಮತ್ತೊಬ್ಬರ ಹೆಸರನ್ನು ಹೇಳುವುದು ಏಕೆ? ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದವರಾಗಿದ್ದಾರೆ ಎನ್ನುವುದು ಸತ್ಯ. ಇಲ್ಲಿ ಸರ್ ಎಂ.ವಿ. ಅವರಿಗೆ ಅಗೌರವ ತೋರುತ್ತಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು’ ಎಂದು ಮನವಿ ಮಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ ‘ಒಬ್ಬ ಐಆರ್‌ಎಸ್ ಅಧಿಕಾರಿಯಾಗಿ ಎರಡು ತಿಂಗಳಿಗೊಮ್ಮೆ ರಾಜ್ಯದಲ್ಲಿ ಪ್ರವಾಸವನ್ನು ಮಾಡಿ ಪ್ರವಾಸಿ ಹವ್ಯಾಸಿ ಕಥೆಗಳನ್ನು ಮತ್ತು ಅಲ್ಲಿನ ವೈಶಿಷ್ಟ್ಯವನ್ನು ತಿಳಿಸುವ ಕೆಲಸವನ್ನು ಇವರು ಮಾಡಿಕೊಂಡು ಬರುತ್ತಿರುವುದು ವಿನೂತನ ಕಾರ್ಯಕ್ರಮವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.