ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
ಮದ್ದೂರು (ಮಂಡ್ಯ): ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಸ್ಟ್ ಪಾಸ್ ಆಗಿ ಬಂದಿದ್ದೀರಿ. ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಕೊಡಿ’ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು.
‘ಮಾಜಿ ಶಾಸಕ ಅನ್ನದಾನಿ ಹಾಗೂ ಮಾಜಿ ಸಚಿವ ಪುಟ್ಟರಾಜು ಅವರ ಮಾತಿಗೆ ಉತ್ತರ ಕೊಡಬೇಕೇನ್ರಿ’ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಪುಟ್ಟರಾಜು ಸಿಡಿಮಿಡಿಗೊಂಡರು.
‘ಇದೆಲ್ಲಾ ತುಂಬಾ ದಿನ ನಡೆಯಲ್ಲ, ರಾಜಕಾರಣದಲ್ಲಿ ನಾನೂ ಅಧಿಕಾರ ಅನುಭವಿಸಿದ್ದೇನೆ. ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕು. ಇದನ್ನು ಕೊನೆ ಮಾಡ್ಲಿಲ್ಲ ಅಂದ್ರೆ ನಾವು ಮಾತನಾಡಬೇಕಾಗುತ್ತದೆ’ ಎಂದು ಖಾರವಾಗಿ ನುಡಿದರು.
‘ನಾವು ಇವರ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾರ ಕಡೆ ಇರುಬೇಕು ಅಂತ ಗೊಂದಲದಲ್ಲಿ ಇಲ್ಲ. ನಾವು ಎಲ್ಲೇ ಇದ್ದರೂ ಕಡೆಗೆ ದೇವೇಗೌಡರ ಕೊಟ್ಟಿಗೆಗೇ ಬರ್ತೀವಿ’ ಎಂದರು.
‘ನಮ್ಮಿಂದಲೇ ನಿಖಿಲ್ ಸೋತಿದ್ದಾರೆ ಅನ್ನೋ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಇದ್ದಾಗ ನಿಖಿಲ್ ಚುನಾವಣೆಯಲ್ಲಿ ಇವ್ರೇನು ಮಾಡಿದ್ರು. ಜಿಲ್ಲೆಯ ಜನತೆ ಆಗ ಅಂಬರೀಷ್ ಅವರ ಅಭಿಮಾನದಿಂದ ಅಂದು ಸುಮಲತಾ ಅವರಿಗೆ ಮತ ನೀಡಿದ್ರು. ಈ ರೀತಿಯ ಆಟಗಳನ್ನು ಆಡಿದ್ರೆ ನಮಗೂ ಮಾತನಾಡೋಕೆ ಬರುತ್ತೆ’ ಎಂದು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.