ಕೆ.ಆರ್.ಪೇಟೆ: ‘ಸರ್ಕಾರವು ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ಸಕಾಲದಲ್ಲಿ ತೆರೆದರೆ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದಿಂದ ಆರಂಭಿಸಿರುವ ಭತ್ತ ಮತ್ತು ರಾಗಿ ಖರೀದಿ ಕೇಂದ್ರದಲ್ಲಿ ಧಾನ್ಯದ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಕ್ವಿಂಟಲ್ ರಾಗಿಗೆ ₹4,290, ಭತ್ತಕ್ಕೆ ₹2,300 ನಿಗದಿಪಡಿಸಿದ್ದು, ಎಲ್ಲಾ ರೈತರಿಗೆ ಅನುಕೂಲವಾಗಬೇಕಾದರೆ ವರ್ಷವಿಡೀ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರು ಬೆಳೆ ಕಟಾವು ಮುಗಿದು ಎರಡ್ಮೂರು ತಿಂಗಳ ಬಳಿಕ ತೆರೆದರೆ ರೈತರಿಗೆ ಯಾವುದೇ ಪ್ರಯೋಜವಾಗುವುದಿಲ್ಲ. ಕಟಾವು ಆಗುತ್ತಿದ್ದಂತೆ ದಲ್ಲಾಳಿಗಳು ರೈತರಿಂದ ಬೆಳೆ ಖರೀದಿಸಿ ಬೆಂಬಲ ಬೆಲೆ ಘೋಷಣೆಯಾಗುತ್ತಿದ್ದಂತೆ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕು’ ಎಂದರು.
ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಎಸ್.ಎಲ್. ಮೋಹನ್ ಮಾತನಾಡಿ' ‘ರೈತರು ಹವಾಮಾನಕ್ಕೆ ಅನುಗುಣವಾಗಿ, ಮಣ್ಣಿನ ಫಲವತ್ತತೆ, ಮಾರುಕಟ್ಟೆ ನಿರ್ವಹಣೆ, ನೀರಿನ ಲಭ್ಯತೆಗಳ ಆಧಾರದ ಮೇಲೆ ವಿವಿಧ ಬೆಳೆಗಳನ್ನು ಬೆಳೆಯಬೇಕು. ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಕಿರಾಮ್, ಎಪಿಎಂಸಿ ಕಾರ್ಯದರ್ಶಿ ಸತೀಶ್, ಮುಖಂಡರಾದ ನಾಗರಾಜೇಗೌಡ, ಡಿ.ಎಸ್.ನಾಗೇಂದ್ರ, ಚಟ್ಟೇನಹಳ್ಳಿ ನಾಗರಾಜು, ಆಹಾರ ಇಲಾಖೆಯ ನಟರಾಜ್, ಫೆಡರೇಷನ್ ವಿಭಾಗೀಯ ಮಾರಾಟ ವ್ಯವಸ್ಥಾಪಕ ವೆಂಕಟೇಶ್ ನಾಯಕ್, ಪಾಂಡವಪುರ ವ್ಯವಸ್ಥಾಪಕಿ ಶೀಲಾ, ಫೆಡರೇಷನ್ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.