ADVERTISEMENT

ಶ್ರೀರಂಗಪಟ್ಟಣ: ಕನಕ ಬಂಡೆ ಅಭಿವೃದ್ಧಿ; ಸಿ.ಎಂ ಜತೆ ಚರ್ಚೆ- ಸಿ.ಎಚ್‌. ವಿಜಯಶಂಕರ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 5:24 IST
Last Updated 28 ಡಿಸೆಂಬರ್ 2021, 5:24 IST
ಶ್ರೀರಂಗಪಟ್ಟಣದಲ್ಲಿ ಸೋಮವಾರ ‘ಕನಕಶ್ರೀ ಗ್ರಾಮೀಣಾಭಿವೃದ್ಧಿ ಟ್ರಸ್ಟ್’ ಅನ್ನು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಉದ್ಘಾಟಿಸಿದರು. ಮುಡಾ ಅಧ್ಯಕ್ಷ ಶ್ರೀನಿವಾಸ್‌, ಟ್ರಸ್ಟ್ ಅಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಹದೇವಪುರ ಬಸವರಾಜು, ಎಸ್‌. ಕಾಳೇಗೌಡ ಇದ್ದಾರೆ
ಶ್ರೀರಂಗಪಟ್ಟಣದಲ್ಲಿ ಸೋಮವಾರ ‘ಕನಕಶ್ರೀ ಗ್ರಾಮೀಣಾಭಿವೃದ್ಧಿ ಟ್ರಸ್ಟ್’ ಅನ್ನು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಉದ್ಘಾಟಿಸಿದರು. ಮುಡಾ ಅಧ್ಯಕ್ಷ ಶ್ರೀನಿವಾಸ್‌, ಟ್ರಸ್ಟ್ ಅಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಹದೇವಪುರ ಬಸವರಾಜು, ಎಸ್‌. ಕಾಳೇಗೌಡ ಇದ್ದಾರೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಕನಕದಾಸರು ಧ್ಯಾನ ಮಾಡಿದ, ಕಾವೇರಿ ನದಿ ಮಧ್ಯೆ ಇರುವ ಕನಕನ ಬಂಡೆ ಪ್ರದೇಶವನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾ ರಿಯನ್ನು ಭೇಟಿ ಮಾಡಿ ಪ್ರಸ್ತಾವ ಸಲ್ಲಿಸ ಲಾಗುವುದು ಎಂದು ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಕನಕಶ್ರೀ ಗ್ರಾಮೀಣಾಭೀವೃದ್ಧಿ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ಯಾತ್ರಾರ್ಥಿಯಾಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಮಹದೇವಪುರ ಬಳಿಯ ಬಂಡೆಯ ಮೇಲೆ ಧ್ಯಾನ ಮಾಡಿದ್ದರು. ಈ ಸ್ಥಳದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದೆ. ಅಂಬಿಗರು ಕನಕ ಗುಡಿ ನಿರ್ಮಿಸಿದ್ದು, ನಿತ್ಯ ಪೂಜೆಯೂ ನಡೆಯುತ್ತಿದೆ. ನದಿಯ ಮಧ್ಯೆ ಇರುವ ಕನಕನ ಬಂಡೆ ವರ್ಷದಲ್ಲಿ ಮೂರು ತಿಂಗಳು ಮಾತ್ರ ಕಾಣುತ್ತದೆ. ಎಲ್ಲ ದಿನವೂ ಈ ಬಂಡೆ ಕಾಣುವಂತೆ ವ್ಯವಸ್ಥೆ ರೂಪಿಸಬೇಕು. ಈ ಸ್ಥಳ ಪ್ರವಾಸಿ ತಾಣವಾಗಬೇಕು. ಈ ದಿಸೆಯಲ್ಲಿ ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ADVERTISEMENT

‘ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ ಈ ಹಿಂದೆ ₹ 50 ಲಕ್ಷ ಅನುದಾನ ನೀಡಿದ್ದೆ. ನಂತರ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಜಾತಿ, ಕುಲ, ಪಂಥಗಳನ್ನು ಮೀರಿದ ಕನಕದಾಸರು ಮಹದೇವಪುರದಲ್ಲಿ ಬೀಡು ಬಿಟ್ಟಿದ್ದರಿಂದ ಈ ಗ್ರಾಮವನ್ನೂ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌ ಮಾತನಾಡಿ, ಕನಕನ ಬಂಡೆ ಪ್ರದೇಶ ಅಭಿವೃದ್ಧಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಿ ಯೋಜನೆ ರೂಪಿಸುವಂತೆ ಕೋರುತ್ತೇನೆ ಎಂದು ತಿಳಿಸಿದರು.

ಮಹದೇವುರ ಬಸವರಾಜು ಮಾತನಾಡಿ, ಚಲನಚಿತ್ರಗಳ ಚಿತ್ರೀಕ ರಣಕ್ಕೆ ಹೆಸರಾದ ಮಹದೇವಪುರ ಯಾತ್ರಾ ಸ್ಥಳವಾಗಬೇಕು ಎಂದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿದರು.

ಅಧ್ಯಕ್ಷ ಚಿಕ್ಕಣ್ಣ, ಖಜಾಂಚಿ ಮಂಜುನಾಥ್‌, ಗೌರವಾಧ್ಯಕ್ಷ ಸಿದ್ದರಾಮೇಗೌಡ, ಉಪಾಧ್ಯಕ್ಷರಾದ ಶಿವಣ್ಣ, ಮಹೇಶ್‌, ಸಹ ಕಾರ್ಯದರ್ಶಿ ಶಿವಲಿಂಗು, ನಿರ್ದೇಶಕರಾದ ನಾಗೇಶ್‌, ಜವರೇಗೌಡ, ತಾ.ಪಂ. ಮಾಜಿ ಸದಸ್ಯ ಎಸ್‌. ಕಾಳೇಗೌಡ, ಮುಖಂಡರಾದ ಸಿದ್ದೇಗೌಡ, ಬೀರೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.