ADVERTISEMENT

ಕನ್ನಡ ಸಂಘಗಳು ಬಲವರ್ಧನೆಗೊಳ್ಳಲಿ: ಗಾಯಕ ಅಪ್ಪಗೆರೆ ತಿಮ್ಮರಾಜು

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಾಯಕ ಅಪ್ಪಗೆರೆ ತಿಮ್ಮರಾಜು ಆಶಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:20 IST
Last Updated 24 ನವೆಂಬರ್ 2025, 2:20 IST
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಮಂಗಲದ ಮುಹಮದ್‌ ಕಲೀಂಉಲ್ಲಾ (ಸಾಹಿತ್ಯ ಕ್ಷೇತ್ರ), ಹಿರಿಯ ಪತ್ರಕರ್ತ ಮತ್ತೀಗೆರೆ ಜಯರಾಂ (ಪತ್ರಿಕೋದ್ಯಮ ಕ್ಷೇತ್ರ) ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಮಂಗಲದ ಮುಹಮದ್‌ ಕಲೀಂಉಲ್ಲಾ (ಸಾಹಿತ್ಯ ಕ್ಷೇತ್ರ), ಹಿರಿಯ ಪತ್ರಕರ್ತ ಮತ್ತೀಗೆರೆ ಜಯರಾಂ (ಪತ್ರಿಕೋದ್ಯಮ ಕ್ಷೇತ್ರ) ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಂಡ್ಯ: ‘ಶಿವಮೊಗ್ಗ ಕರ್ನಾಟಕ ಸಂಘ, ಧಾರವಾಡ ವಿದ್ಯಾವರ್ಧಕ ಸಂಘವು ನಶಿಸಿಹೋಗುವ ಹಂತ ತಲುಪಿದ್ದು, ಸಾಹಿತ್ಯ, ಸಂಸ್ಕೃತಿ ಬೆಳೆಸುತ್ತಿರುವ ಕನ್ನಡ ಸಂಘಗಳನ್ನು ಬಲವರ್ಧನೆಗೊಳಿಸುವುದು ಸರ್ಕಾರದ ಜವಾಬ್ದಾರಿ ಆಗಬೇಕು’ ಎಂದು ಗಾಯಕ ಅಪ್ಪಗೆರೆ ತಿಮ್ಮರಾಜು ಒತ್ತಾಯಿಸಿದರು.

ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರ, ಕೆ.ವಿ.ಶಂಕರಗೌಡ ಅಧ್ಯಯನ ಪೀಠದ ಸಹಯೋಗದಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡ್ಯದ ಕರ್ನಾಟಕ ಸಂಘವು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ ಸದೃಢವಾಗಿ ಬೆಳವಣಿಗೆ ಕಾಣುತ್ತಿದೆ. ಮಂಡ್ಯ ಜಿಲ್ಲೆಯು ಹಸಿರು, ರೈತರ ನಾಡು ಹಾಗೂ ಜನಪದ ಸಂಸ್ಕೃತಿಯ ತವರೂರು ಎನಿಸಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ಕರ್ನಾಟಕ ಸಂಘವು ‌‌‌ನಿರಂತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ವರ್ಷದಿಂದ ವರ್ಷಕ್ಕೆ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವುದು ಹೆಗ್ಗಳಿಕೆಗೆ ಸಾಕ್ಷಿ. ಒಂದು ಸಂಘವನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ’ ಎಂದರು.

‘ಪ್ರೊ.ಬಿ.ಜಯಪ್ರಕಾಶಗೌಡ ಅವರು ಕರ್ನಾಟಕ ಸಂಘದ ಸಾರಥಿಯಾಗಿರುವಂತೆ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದಾರೆ, ಕನ್ನಡ ಸಾಹಿತ್ಯದ ಕೆಲಸವೆಂದರೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂತಹ ಸಂಘ ಇನ್ನಷ್ಟು ಕ್ರಿಯಾಶೀಲವಾಗಿ ಬೆಳವಣಿಗೆ ಸಾಧಿಸಲಿ’ ಎಂದು ಆರೈಸಿದರು.

ಲಯನ್ಸ್‌ ಸಂಸ್ಥೆಯ ಮಾಜಿ ಗವರ್ನರ್‌ ಕೆ.ದೇವೇಗೌಡ ಮಾತನಾಡಿ, ‘ಕುಟುಂಬದ ಏಳಿಗೆ ಬಗ್ಗೆ ಚಿಂತಿಸದೆ ಸಮಾಜದ ಬಗ್ಗೆ ಕಳಕಳಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಆ ಸಂಸ್ಥೆ ಯಾವ ರೀತಿ ಬೆಳವಣಿಗೆ ಕಾಣುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಜನತಾ ಶಿಕ್ಷಣ ಕಟ್ಟಿದ ಕೆ.ವಿ.ಶಂಕರಗೌಡರು ನಿಲ್ಲುತ್ತಾರೆ. ಅವರು ಅವರ ಕುಟುಂಬಕ್ಕೆ ಸಂಸ್ಥೆಯನ್ನು ಬಿಟ್ಟುಕೊಡಲಿಲ್ಲ, ಅದೇ ರೀತಿ ಎಚ್.ಡಿ.ಚೌಡಯ್ಯ ಅವರು ಕೂಡ ಅವರ ಕುಟುಂಬಕ್ಕೆ ಟ್ರಸ್ಟ್ ನೀಡದೆ ಕೆ.ವಿ.ಶಂಕರಗೌಡರ ಮೊಮ್ಮಗನಿಗೆ ಜವಾಬ್ದಾರಿ ಒಪ್ಪಿಸಿದ್ದೆ ಸಾಕ್ಷಿಯಾಗಿ ಕಾಣುತ್ತದೆ ಎಂದರು.

‘ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ’, ‘ಓ ನನ್ನ ಚೇತನ ಆಗು ನೀ ಅನಿಕೇತನ’ ಸೇರಿದಂತೆ ಹಲವು ಗೀತೆಗಳನ್ನು ಅಪ್ಪಗೆರೆ ತಿಮ್ಮರಾಜು ಹಾಡಿ ರಂಜಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪರಿಸರ ಎಂಜಿನಿಯರಿಂಗ್ ಸಂಘದ ಅಧ್ಯಕ್ಷ ಕೆ.ಸಿ.ಜಯರಾಮು, ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಗುರುರಾಜಪ್ರಭು, ಸಂಘದ ಕಾರ್ಯದರ್ಶಿ ಲೋಕೇಶ್‌ ಚಂದಗಾಲು, ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ಕೋಣನಹಳ್ಳಿ ಜಯರಾಮ್‌ ಭಾಗವಹಿಸಿದ್ದರು.

Highlights - ಅವಿರತವಾಗಿ ದುಡಿಯುತ್ತಿರುವ ಕರ್ನಾಟಕ ಸಂಘ 42 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಗಮನ ಸೆಳೆದ ಅಪ್ಪಗೆರೆ ತಿಮ್ಮರಾಜು ಗಾಯನ

Cut-off box - 42 ಜನರಿಗೆ ಪ್ರಶಸ್ತಿ ‍ಪ್ರದಾನ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ಸಂಗೀತ ರಂಗಭೂಮಿ ಜಾನಪದ ಕೃಷಿ ಪತ್ರಿಕೋದ್ಯಮ ಸಂಘಟನೆ ಕ್ರೀಡೆ ಕರಕುಶಲ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 42 ಜನರಿಗೆ ₹15 ಸಾವಿರ ಹಾಗೂ ಫಲಕದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.