ADVERTISEMENT

ಕಾಂಗ್ರೆಸ್‌ ಗೆದ್ದರೆ ಹಾಲಿನ ಪ್ರೋತ್ಸಾಹಧನ ₹ 6ಕ್ಕೆ ಹೆಚ್ಚಳ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 14:18 IST
Last Updated 27 ಜನವರಿ 2023, 14:18 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಮಂಡ್ಯ: ‘ಮುಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಪ್ರತಿ ಲೀಟರ್‌ ಹಾಲಿನ ಪ್ರೋತ್ಸಾಹಧನವನ್ನು ₹ 6ಕ್ಕೆ ಹೆಚ್ಚಿಸಲಾಗುವುದು’ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.

ಶುಕ್ರವಾರ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ‘ನಾವು ಅಧಿಕಾರದಲ್ಲಿದ್ದಾಗ ₹ 5 ಪ್ರೋತ್ಸಾಹಧನ ನೀಡುತ್ತಿದ್ದೆವು, ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ₹ 1 ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಹೆಚ್ಚಿಸಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ ಕೂಡ ಪ್ರೋತ್ಸಾಹಧನ ಹೆಚ್ಚಿಸಲಿಲ್ಲ. ನಮ್ಮ ಸರ್ಕಾರ ಬಂದರೆ ₹ 1 ಹೆಚ್ಚಿಸಿ ₹ 6 ನೀಡವುದುದು ನಮ್ಮ ಬದ್ಧತೆಯಾಗಿದೆ’ ಎಂದರು.

‘ರಾಜ್ಯದಲ್ಲಿ ಲಕ್ಷಾಂತರ ಜಾನುವಾರುಗಳು ಚರ್ಮಗಂಟು ರೋಗದಿಂದ ಬಳಲುತ್ತಿವೆ. ಇದರಿಂದ ಹಾಲು ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ. 94 ಲಕ್ಷ ಲೀಟರ್‌ ಇದ್ದ ಹಾಲು ಉತ್ಪಾದನೆ ಈಗ 76–78 ಲಕ್ಷ ಲೀಟರ್‌ಗೆ ಕುಸಿದಿದೆ. ಚರ್ಮಗಂಟು ರೋಗ ಉಲ್ಭಣಗೊಂಡಿರುವುದೇ ಇದಕ್ಕೆ ಕಾರಣ’ ಎಂದರು.

ADVERTISEMENT

‘ಪಶು ಸಂಗೋಪನಾ ಇಲಾಖೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಪಶು ಆಸ್ಪತ್ರೆಯಲ್ಲಿ ವೈದ್ಯರು, ಪಶು ನಿರೀಕ್ಷಕರು ಇಲ್ಲದ ಕಾರಣ ಚರ್ಮಗಂಟು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಈ ಕುರಿತು ಪಶು ಸಂಗೋಪನಾ ಸಚಿವನನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನಿಸಿದಾಗ ಆತ ಉತ್ತರ ನಿಡದೇ ಓಡಿ ಹೋದ’ ಎಂದು ವ್ಯಂಗ್ಯವಾಡಿದರು.

‘ಹಾಲು, ಮೊಸರು, ಬೆಣ್ಣೆ ಮೇಲೂ ಜಿಎಸ್‌ಟಿ ವಿಧಿಸಿದ್ದು ಸರ್ಕಾರ ಬಡವರ ರಕ್ತ ಹೀರುತ್ತಿದೆ. ರಾಸಾಯನಿಕ ಗೊಬ್ಬರ, ಸಿಮೆಂಟ್‌, ಕಬ್ಬಿಣಿ ಇನ್ನಿತರ ಅಗತ್ಯ ವಸ್ತುಗಳ ಮೇಲೂ ತೆರಿಗೆ ವಿಧಿಸಿ ಸಾಮಾನ್ಯ ಜನರ ಜೀವನ ಹಾಳು ಮಾಡಿದೆ. ಮಂತ್ರಿಗಳು ತಿಗಣೆಗಳ ರೀತಿಯಲ್ಲಿ ಜನರ ರಕ್ತ ಕುಡಿಯುತ್ತಿದ್ದಾರೆ. ಅಲೀಬಾಬಾ ಮತ್ತು 150 ಮಂದಿ ಕಳ್ಳರ ಗುಂಪು ಅದಾಗಿದೆ’ ಎಂದರು.

25 ಪ್ರಕರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ ‘ಕೆಪಿಸಿಸಿ ಅಧ್ಯಕ್ಷನಾದ ನಂತರ ನನ್ನ ಮೇಲೆ 25 ಪ್ರಕರಣ ದಾಖಲು ಮಾಡಲಾಗಿದೆ. ಐಟಿ, ಇಡಿ, ಸಿಬಿಐ ಬಿಟ್ಟು ನಮ್ಮನ್ನು ಕಟ್ಟಿಹಾಕಲು ಸಾಧ್ಯವಿಲ್ಲ’ ಎಂದರು.

‘ಬಿಜೆಪಿಯವರು ಬೆಂಗಳೂರು– ಮೈಸೂರು ದಶಪಥ ಯೋಜನೆಯನ್ನು ತಮ್ಮದು ಎಂದು ಉದ್ಘಾಟನೆ ಮಾಡಲು ಸಿದ್ಧರಾಗುತ್ತಾರೆ. ಆದರೆ, ಆ ಯೋಜನೆಗೆ ಆರಂಭದಿಸಿದ್ದು ಕಾಂಗ್ರೆಸ್‌ ಸರ್ಕಾರ, ಆಸ್ಕರ್‌ ಫರ್ನಾಂಡಿಸ್‌ ಹೆದ್ದಾರಿ ಸಚಿವರಾಗಿದ್ದಾಗ ಯೋಜನೆಗೆ ಅನುಮೋದನೆ ದೊರೆಕಿತು’ ಎಂದರು.

ಡಿಕೆಶಿಗೆ ಗೂಳಿ ಉಡುಗೊರೆ

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂಳಿಯಂತೆ ನುಗ್ಗಿ ಮುಖ್ಯಮಂತ್ರಿ ಆಗಲಿ' ಎಂದು ಹಾರೈಸಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಗೂಳಿಯೊಂದನ್ನು ಉಡುಗೊರೆ ನೀಡಿದರು. ಶ್ವೇತವರ್ಣದ ಗೂಳಿಯನ್ನು ಅಲಂಕಾರದೊಂದಿಗೆ ವೇದಿಕೆ ಮುಂದಕ್ಕೆ ಕರೆತರಲಾಯಿತು. ಡಿ.ಕೆ.ಶಿವಕುಮಾರ್ ನಮಸ್ಕಾರ ಮಾಡಿ ಗೂಳಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.