ADVERTISEMENT

ಕರ್ನಾಟಕದಲ್ಲೇ ಗ್ಯಾರಂಟಿ ಯೋಜನೆ ಉತ್ತಮ: ಎನ್. ಚಲುವರಾಯಸ್ವಾಮಿ

ಜಿಲ್ಲಾ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:46 IST
Last Updated 5 ನವೆಂಬರ್ 2025, 7:46 IST
ಮದ್ದೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದರು 
ಮದ್ದೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದರು    

ಮದ್ದೂರು: ‘ದೇಶದಲ್ಲಿ ತಮಿಳುನಾಡು ಬಿಟ್ಟರೆ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಉತ್ತಮ ಗ್ಯಾರಂಟಿ ಯೋಜನೆಗಳನ್ನು ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಎಂಡಿಸಿಸಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೆ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶಂಕರೇಗೌಡರಿಂದ ನಿರ್ಮಾಣವಾದ ಎಂಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಯಾವುದೇ ಪಕ್ಷವು 11 ಸ್ಥಾನಗಳನ್ನು ಪಡೆದಿಲ್ಲ, ಇಷ್ಟೊಂದು ಅಭೂತಪೂರ್ವ ಹಾಗೂ ವಿಶೇಷ ಗೆಲುವನ್ನು ಕಾಂಗ್ರೆಸ್ ಬೆಂಬಲಿತರು ಪಕ್ಷಕ್ಕೆ ತಂದು ಕೊಟ್ಟಿರುವುದು ಹೆಮ್ಮೆಯ ಸಂಗತಿ. ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರ ಶ್ರಮವೇ ಮುಖ್ಯ, ಕಾರ್ಯಕರ್ತರೇ ಆಧಾರ ಸ್ಥಂಭ’ ಎಂದರು.

ADVERTISEMENT

‘ನಾನು ಕೃಷಿ ಸಚಿವನಾದ ಮೇಲೆ ಕೃಷಿ ವಿಶ್ವವಿದ್ಯಾಲಯ, ಸ್ಥಗಿತಗೊಂಡಿದ್ದ ಮೈಶುಗರ್ಶ್ ಕಾರ್ಖಾನೆಯ ಪುನರಾರಂಭಕ್ಕೆ ದುಡಿದಿದ್ದೇನೆ’ ಅದಕ್ಕೆ ಕಾರ್ಯಕರ್ತರ ಸಹಕಾರವೇ ಕಾರಣ. ಈ ಅವಧಿಯ ಎರಡೂವರೆ ವರ್ಷಗಳಲ್ಲಿ ಆಗಿರುವಷ್ಟು ಕೆಲಸಗಳು ಬೇರೆ ಯಾವುದೇ ಅವಧಿಯಲ್ಲಿ ಆಗಿಲ್ಲ, ಜಿಲ್ಲೆಯಲ್ಲಿ ಎರಡೂವರೆ ವರ್ಷಗಳಲ್ಲಿ ₹7000 ಕೋಟಿಯಿಂದ ₹10,000 ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಸುಳ್ಳು ಹೇಳುವ ಸರದಾರ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಮೇಲೆ ವ್ಯಂಗ್ಯವಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೆ.ಎಂ. ಉದಯ್ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧಿಸಿದ್ದ ತಾಲ್ಲೂಕಿನ ಮೂವರೂ ಸೇರಿದಂತೆ ಜಿಲ್ಲೆಯ 9 ಮಂದಿ ಜಯಗಳಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಉತ್ಸಾಹವನ್ನು ಇಮ್ಮಡಿಗೊಳಿಸಿದ್ದು, ಮುಂಬರುವ ಚುನಾವಣೆಗೆ ಇದು ದಿಕ್ಸೂಚಿ’ ಎಂದರು.

‘ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಈ ಹಿಂದೆ ಆಗದೇ ಇರುವಷ್ಟು ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ನಡೆದಿವೆ. ಇವುಗಳನ್ನೇ ಮುಂದಿಟ್ಟುಕೊಂಡು ಮುಂಬರುವ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವ ಹಾಗೆ ಶ್ರಮವಹಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮನ್‌ಮುಲ್ ಅಧ್ಯಕ್ಷ ಶಿವಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ. ಗಂಗಾಧರ್, ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮುಖಂಡರಾದ ಚಿದಂಬರ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಬಸವರಾಜು, ಕುರುಬರ ಸಂಘದ ಅಧ್ಯಕ್ಷ ಸತ್ಯಾನಂದ, ಸಿ.ಟಿ ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಸರ್ಕಾರದಿಂದ ₹2500 ಕೋಟಿ ಪರಿಹಾರ ನೀಡಲು ಮುಂದಾಗಿದ್ದು ಭತ್ತ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಈಗಾಗಲೇ ಸೂಚಿಸಲಾಗಿದೆ.
– ಎನ್. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.