ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದರೂ ವೃದ್ಧರಿಬ್ಬರು ಭಾನುವಾರ ಬೆಳಿಗ್ಗೆ ನದಿಗಿಳಿದು ಅಸ್ಥಿ ವಿಸರ್ಜನೆ ಮಾಡಿದರು
ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಪ್ರವಾಹವನ್ನು ಲೆಕ್ಕಿಸದೆ ಪಟ್ಟಣ ಸಮೀಪದ ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಇತರ ಕಾರ್ಯಗಳು ಅಡೆ ತಡೆಯಿಲ್ಲದೆ ನಡೆಯುತ್ತಿವೆ.
ನೀರಿನ ಸೆಳೆತ ಇದ್ದರೂ ನದಿಗಿಳಿದು ಸ್ನಾನ, ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಇತರ ಕೈಂಕರ್ಯಗಳು ನಡೆಯುತ್ತಿವೆ. ವೃದ್ಧರಿಬ್ಬರು ಭಾನುವಾರ ಬೆಳಿಗ್ಗೆ ಪಶ್ಚಿಮವಾಹಿನಿಯ ಎಡ ಪಾರ್ಶ್ವದ ಮಂಟಪದ ಬಳಿ ಕಾವೇರಿ ನದಿಗಿಳಿದು ನೀರಿನ ಸೆಳೆತದ ನಡುವೆಯೂ ಅಸ್ಥಿ ವಿಸರ್ಜನೆ ಮಾಡಿದರು. ಅವರ ಜತೆಗೆ ಐದಾರು ಮಂದಿ ನದಿಗಿಳಿದು ಸ್ನಾನವನ್ನೂ ಮಾಡಿದರು.
ಪಶ್ಚಿಮವಾಹಿನಿಯಲ್ಲಿ ಕಲ್ಲಿನ ಮಂಟಪವೊಂದು ಅರ್ಧದಷ್ಟು ಮುಳುಗಿದ್ದು, ಅದರ ಸನಿಹದಲ್ಲೇ ಅಸ್ಥಿ ವಿಸರ್ಜನೆಯಂತಹ ಕಾರ್ಯ ನಡೆಸಲು ಅವಕಾಶ ಮಾಡಿಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ನದಿಯಲ್ಲಿ ಪ್ರವಾಹ ತಗ್ಗುವವರೆಗೆ ಯಾರೂ ನೀರಿಗಿಳಿಯದಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಜಿಲ್ಲಾಧಿಕಾರಿ ಕುಮಾರ ಅವರು ಶನಿವಾರ (ಜುಲೈ 20) ವಷ್ಟೇ ಪಟ್ಟಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
‘ಪಶ್ಚಿಮವಾಹಿನಿ ಶ್ರದ್ಧಾ ಕೇಂದ್ರಕ್ಕೆ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಲು ರಾಜ್ಯದ ವಿವಿಧೆಡೆಗಳಿಂದ ಜನರು ಬರುತ್ತಿದ್ದು, ಪ್ರವಾಹ ಇದ್ದರೂ ನದಿಗೆ ಇಳಿಯುತ್ತಿದ್ದಾರೆ. ಕಾಲು ಜಾರಿ ಬಿದ್ದರೆ ನೀರಿನ ರಭಸಕ್ಕೆ ಅವರ ಶವವೂ ಸಿಗುವುದಿಲ್ಲ. ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಇಲ್ಲೇಕೆ ಪೊಲೀಸರನ್ನು ನಿಯೋಜಿಸಿಲ್ಲ’ ಎಂದು ಪಾಲಹಳ್ಳಿಯ ಮಂಜುನಾಥ್ ಪ್ರಶ್ನಿಸಿದರು.
‘ಪಶ್ಚಿಮವಾಹಿನಿ, ಗೋಸಾಯಿಘಾಟ್, ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಇತರ ಕಾರ್ಯಗಳನ್ನು ನಿಷೇಧಿಸಲಾಗಿದೆ. ಅಂತಹ ಕಾರ್ಯಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಮಿಷಾಂಬಾ ದೇವಾಲಯ, ಎಡಮುರಿ ಮತ್ತು ಬಲಮುರಿ ಫಾಲ್ಸ್, ಬಂಗಾರದೊಡ್ಡಿ ಅಣೆಕಟ್ಟೆ ಬಳಿ ಜನರು ನದಿಗೆ ಇಳಿಯುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗೊಳ ಬಳಿಯ ಭಂ ಭಂ ಆಶ್ರಮ ನಡುಗಡ್ಡೆಯಲ್ಲಿ ಇನ್ನುಳಿದ 10 ಮಂದಿಗೆ ಹೊರಗೆ ಬರುವಂತೆ ನೊಟೀಸ್ ನೀಡಲಾಗಿದೆ’ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.