ADVERTISEMENT

Cuavery Arathi | ಮಂಡ್ಯದವರ ಮನಸು ಬೆಲ್ಲ, ಸಕ್ಕರೆಯಂತೆ: ವಿನಯ್ ಗುರೂಜಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 5:47 IST
Last Updated 1 ಅಕ್ಟೋಬರ್ 2025, 5:47 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದಲ್ಲಿ ಮಂಗಳವಾರ ‘ಕಾವೇರಿ ಆರತಿ’ಯ ಸಮಾರೋಪ‍ ಸಮಾರಂಭದಲ್ಲಿ ಕಾವೇರಿ ಮಾತೆಗೆ ವಿನಯ್‌ ಗುರೂಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು. ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌, ದಿನೇಶ್‌ ಗೂಳಿಗೌಡ, ಪ್ರೊ.ಕೃಷ್ಣೇಗೌಡ, ಜಿಲ್ಲಾಧಿಕಾರಿ ಕುಮಾರ ಪಾಲ್ಗೊಂಡಿದ್ದರು 
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದಲ್ಲಿ ಮಂಗಳವಾರ ‘ಕಾವೇರಿ ಆರತಿ’ಯ ಸಮಾರೋಪ‍ ಸಮಾರಂಭದಲ್ಲಿ ಕಾವೇರಿ ಮಾತೆಗೆ ವಿನಯ್‌ ಗುರೂಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು. ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌, ದಿನೇಶ್‌ ಗೂಳಿಗೌಡ, ಪ್ರೊ.ಕೃಷ್ಣೇಗೌಡ, ಜಿಲ್ಲಾಧಿಕಾರಿ ಕುಮಾರ ಪಾಲ್ಗೊಂಡಿದ್ದರು    

ಕೆಆರ್‌ಎಸ್‌ (ಮಂಡ್ಯ): ‘ದೇಶದ ದುರ್ಗತಿ ಹೋಗಲಿ, ನಾಡು ಸುಭಿಕ್ಷದಿಂದ ಕೂಡಿರಲಿ ಎಂದು ಕಾವೇರಿ ಆರತಿ ಆಯೋಜಿಸಲಾಗಿದೆ. ನದಿಯನ್ನು ಆರಾಧಿಸುವುದು ನಮ್ಮ ಕರ್ತವ್ಯ. ಕಾವೇರಿ ನದಿಗೆ ವಿಶೇಷ ಶಕ್ತಿ ಇದೆ.‌ ಆದಿ ರಂಗ, ಮಧ್ಯ ರಂಗ, ಅಂತ್ಯ ರಂಗನ ಪಾದವನ್ನು ತೊಳೆಯುವ ಕಾವೇರಿ ವಿಶೇಷ ದೈವ ಶಕ್ತಿಯನ್ನು ಹೊಂದಿದವಳು’ ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. 

ಶ್ರೀರಂಗಪಟ್ಟಣ ತಾಲ್ಲೂಕಿನ ಬೃಂದಾವನ ಉದ್ಯಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕಾವೇರಿ ಆರತಿ’ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾವೇರಿ ನೀರು ಕುಡಿದವರಲ್ಲಿ ಕೆಟ್ಟ ಭಾವನೆ ಇರಲ್ಲ. ಅದಕ್ಕೆ ಮಂಡ್ಯದ ಜನ ಅತಿಥಿ ಸತ್ಕಾರಕ್ಕೆ ಹೆಸರಾದವರು. ಮಂಡ್ಯದವರ ಮನಸು ಬೆಲ್ಲ ಸಕ್ಕರೆಯಂತೆ. ಕನ್ನಡ ಸಾಹಿತ್ಯ ಸಮ್ಮೇಳನ, ಶ್ರೀರಂಗಪಟ್ಟಣ ದಸರಾ, ಈಗ ಕಾವೇರಿ ಆರತಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯತ್ತ ಇಡೀ ಇಂಡಿಯಾ ಮತ್ತೆ ತಿರುಗಿ ನೋಡುವಂತಾಗಿದೆ ಎಂದರು.

ಪ್ರತಿನಿತ್ಯ ನಮ್ಮನ್ನೆಲ್ಲಾ ಶುದ್ಧಿ ಮಾಡುವ ಕಾವೇರಿಯು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದ್ದಾಳೆ. ಹರಿಯುವ ನದಿಗೆ ಶಕ್ತಿ ಹೆಚ್ಚು. ಕಾವೇರಿ ಇಂದ್ರ ಲೋಕದವಳು. ಅಗಸ್ತ್ಯರು ಕಮಂಡಲದಲ್ಲಿ ಕಾವೇರಿಯನ್ನು ನಮ್ಮ ನಾಡಿಗೆ ತಂದರು. ಕಾವೇರಿ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ದೈವ ಶಕ್ತಿಯನ್ನು ಕಾವೇರಿ ಹೊಂದಿದ್ದಾಳೆ ಎಂದರು.

ADVERTISEMENT

ವ್ಯಾಪಾರ ವಹಿವಾಟು ಹೆಚ್ಚಳ:

ಸೆ.26ರಿಂದ ಕಾವೇರಿ ಆರತಿ ಕಾರ್ಯಕ್ರಮ ಆರಂಭವಾದ ಬಳಿಕ ಕೆಆರ್‌ಎಸ್‌ಗೆ ಆಗಮಿಸಿದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪರಿಣಾಮ ಆರ್ಥಿಕ ವಹಿವಾಟು ಕೂಡ ಹೆಚ್ಚಳವಾಗಿ ಸ್ಥಳೀಯ ವ್ಯಾಪಾರಿಗಳು ಕೂಡ ಸಂತಸ ಹಂಚಿಕೊಂಡಿದ್ದಾರೆ. 

ಕಾರ್ಯಕ್ರಮದಲ್ಲಿ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡರು, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ, ಮೈಸೂರು ಪಶ್ಚಿಮ ವಲಯ ಡಿಐಜಿ ಡಾ.ಎಂ. ಬಿ. ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ನಂದಿನಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪಾಲ್ಗೊಂಡಿದ್ದರು. 

ಶಂಖನಾದ, ನಗಾರಿಯ ಸದ್ದು:

ಐದು ದಿನಗಳಲ್ಲಿ ಪ್ರತಿ ಸಂಜೆ ಶಂಖನಾದ, ಡೊಳ್ಳು, ನಗಾರಿ ಸದ್ದಿನೊಂದಿಗೆ, ವೇದ ಮಂತ್ರಗಳ ಪಠಣದೊಂದಿಗೆ ಸುಮಾರು ಒಂದು ಗಂಟೆ ಕಾವೇರಿ ಆರತಿ ನೆರವೇರಿತು. ಕರ್ನಾಟಕದಿಂದ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಪ್ರವಾಸಿಗರು ಕಾವೇರಿ ಆರತಿಯನ್ನು ಕಣ್ತುಂಬಿಕೊಂಡರು.

13 ಜನರನ್ನೊಳಗೊಂಡ ವೈದಿಕರ ತಂಡ ಹಾಗೂ ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಮಾಡಿ ಬಾಗಿನ ಅರ್ಪಣೆ ಮಾಡಲಾಗುತ್ತಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ. ಮೂರು ದಿಕ್ಕಿಗೂ ಶಂಖನಾದ, ದೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣದ ಜೊತೆಗೆ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯವನ್ನು ಸೆ.26ರಿಂದ 30ರವರೆಗೆ ಪ್ರತಿ ಸಂಜೆ ನೆರವೇರಿಸಲಾಯಿತು.

ಕಾವೇರಿ ಆರತಿ ಬಳಿಕ ಕೆಆರ್‌ಎಸ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಆರತಿ ದೀಪಾಲಂಕರ ವೀಕ್ಷಣೆಗೆ ಪ್ರತಿ ನಿತ್ಯ 25 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ
ಜಯಂತ್ ಕಾರ್ಯಪಾಲಕ ಎಂಜಿನಿಯರ್‌ ಕಾವೇರಿ ನೀರಾವರಿ ನಿಗಮ
ಕಾವೇರಿ ತಾಯಿಗೆ ಸಲ್ಲಿಸುವ ಪೂಜೆ ಆರತಿಯನ್ನು ಜಿಲ್ಲೆಯ ರೈತರು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಕುಡಿಯುವ ನೀರು ಕೃಷಿಗೆ ತೊಂದರೆಯಾಗದಂತೆ ಪೂಜೆ ನೆರವೇರಿಸಲಾಗಿದೆ
ರಮೇಶ ಬಂಡಿಸಿದ್ದೇಗೌಡ ಶಾಸಕ 

‘ನದಿ ಮಲಿನವಾಗದಂತೆ ನೋಡಿಕೊಳ್ಳಿ’

ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ ‘ಇಂದ್ರಿಯಗಳಿಂದ ಲೋಕದ ಅನುಭವ ಆಗುತ್ತದೆ. ಆದರೆ ಅದರಿಂದ ಆಚೆಗೂ ಆಗುವ ಅನುಭವವೊಂದಿದೆ. ಅದು ಭಕ್ತಿ‌ ಶಕ್ತಿ ಪೂಜ್ಯ ಭಾವನೆ ಏನಾದರೂ ಆಗಬಹುದು. ದೇವಸ್ಥಾನದಲ್ಲಿ ಕೊಡವ ತೀರ್ಥ ನೀರಲ್ಲ. ಅದೊಂದು ಭಕ್ತಿ ಶಕ್ತಿಯನ್ನು ಹೊಂದಿದೆ. ಕಾವೇರಿ ಕೂಡ ಬರಿ ನದಿಯ ನೀರಲ್ಲ. ಆ ನೀರಿನಲ್ಲಿ ಒಂದು ಪೂಜ್ಯ ಭಾವನೆ ಇದೆ. ಪುರಾಣದಿಂದ ಕಾವೇರಿ ಹರಿದು ಈ ನಾಡಿನ ಜನರ ಬದುಕನ್ನು ಬಂಗಾರವನ್ನಾಗಿಸಿದ್ದಾಳೆ. ಕಾವೇರಿಯನ್ನು ನಾವು ಪೂಜಿಸುವುದರ ಜೊತೆಗೆ ನದಿಯ ಸ್ವಚ್ಛತೆಯನ್ನೂ ಕಾಪಾಡಬೇಕು. ಅಮೆರಿಕನ್ನರು ನೀರನ್ನು ಪೂಜಿಸದಿದ್ದರೂ ಸ್ವಚ್ಛತೆ ಕಾಪಾಡುತ್ತಾರೆ.‌ ನಾವು ನೀರನ್ನು ಪೂಜಿಸುವುದರ ಜೊತೆಗೆ ನೀರು ಮಲೀನವಾಗದಂತೆ ನೋಡಿಕೊಳ್ಳಬೇಕು ಎಂದು ಆಶಿಸಿದರು.

‘ಪ್ರವಾಸೋದ್ಯಮಕ್ಕೂ ಉತ್ತೇಜನ’

‘ವಿಶ್ವಪ್ರಸಿದ್ಧ ಕೆಆರ್‌ಎಸ್‌ಗೆ ಹೊಸ ಸ್ವರೂಪವನ್ನು ತಂದುಕೊಡುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶವನ್ನು ಹಸಿರಾಗಿಸಿರುವುದರ ಜೊತೆಗೆ ಜನರಿಗೆ ಅನ್ನ ನೀರು ನೀಡುತ್ತಿರುವ ಕಾವೇರಿ ಮಾತೆಗೆ ನಮಿಸುವ ಒಂದು ಅವಕಾಶವನ್ನು ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ’ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸಂತಸ ವ್ಯಕ್ತಪಡಿಸಿದರು.  ‘ಕಾವೇರಿ ಆರತಿ ಮೂಲಕ ಸರ್ಕಾರ ಎಲ್ಲರ ಹೃದಯ ಗೆದ್ದಿದೆ. ನದಿಗೆ ಪೂಜೆ ಮಾಡುವುದಕ್ಕೆ ಯಾರ ಅನುಮತಿ ಒಪ್ಪಿಗೆ ಬೇಕಿಲ್ಲ. ಪ್ರಕೃತಿ ನಮ್ಮ ಮಾತೆ. ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ನಮ್ಮ ಪರಂಪರೆ’ ಎಂದು ಜಿಲ್ಲೆಯ ಶಾಸಕರು ಅಭಿ‌ಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.