ADVERTISEMENT

ಸೋಂಕು ನಿವಾರಕ ಸಿಂಪಡಣಾ ಯಂತ್ರ ಖರೀದಿ: ರವೀಂದ್ರ ಶ್ರೀಕಂಠಯ್ಯ

ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:09 IST
Last Updated 23 ಜುಲೈ 2020, 12:09 IST
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು   

ಮಂಡ್ಯ: ‘ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಮೈಸೂರಿನ ವಿಕ್ರಾಂತ್‌ ಟೈರ್‌ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ನೌಕರರ ಮೇಲೆ ನಿಗಾ ವಹಿಸಬೇಕು. ಕೊರೊನಾ ಸೋಂಕು ಹರಡದಂತೆ ತಡೆಯಲು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸೋಂಕು ನಿವಾರಕ ಸಿಂಪಡಣೆ ಯಂತ್ರವನ್ನು ಖರೀದಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಿಡಿಒ, ಆಡಳಿತಾಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಮೈಸೂರಿನ ವಿಕ್ರಾಂತ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 50 ಕ್ಕೂ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತಂಕ ಮೂಡಿಸಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲೂ ಸಾಕಷ್ಟು ಮಂದಿ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರ ಮೇಲೆ ನಿಗಾ ಇಟ್ಟು ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಪ್ರತೀ ಹಳ್ಳಿಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ಆಗಸ್ಟ್ ಕೊನೆ ವಾರದ ವೇಳೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುವ ವರದಿ ಇರುವ ಕಾರಣ ಎಲ್ಲರೂ ವಹಿಸಬೇಕು. ಕೆಲವೆಡೆ ಹ್ಯಾಂಡ್‌ ಪಂಪ್‌ ಬಳಸಿ ಸೋಂಕು ನಿವಾರಕ ಸಿಂಪಡಿಸುತ್ತಿದ್ದು, ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಗುಣಮಟ್ಟದ ದ್ರಾವಣ ಸಿಂಪಡಣೆಯ ಯಂತ್ರ ಖರೀದಿಸಬೇಕು. ಕೋವಿಡ್ ಸಂಬಂಧದ ವಿಷಯದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

ಕೊತ್ತತ್ತಿ ಪಿಡಿಒ ಜಯಪ್ಪ ಮಾತನಾಡಿ ‘ಸಾರ್ವಜನಿಕ ಸ್ಥಳಗಳಲ್ಲಿ ಜನರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕೋವಿಡ್‌ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲು ನೆರವಾಗಿದ್ದಾರೆ. ನಮ್ಮ ವ್ಯಾಪ್ತಿಯ ಗ್ರಾಮದಲ್ಲಿ ನಾಲ್ಕು ಬಾರಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಕೊತ್ತತ್ತಿಯಲ್ಲಿ ಕೊರೊನಾ ಒಬ್ಬರು ಸತ್ತಿದ್ದು, ಮತ್ತೊಬ್ಬರಿಗೆ ಪಾಸಿಟಿವ್‌ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇಒ ಗಂಗಣ್ಣ ಮಾತನಾಡಿ ‘ಭಾನುವಾರ ಮತ್ತು ಗುರುವಾರ ಔಷಧಿ ಸಿಂಪಡಣೆ ಮಾಡಲು ಕ್ರಮ ವಹಿಸಬೇಕು. ಇದರಿಂದ ರೋಗ ಹೆಚ್ಚು ಹರಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ. ಸ್ವೀಪರ್ ಸಿಬ್ಬಂದಿ ಕೊರೊತೆ ಇದ್ದರೆ, ಹೊರಗಡೆಯಿಂದ ತೆಗೆದುಕೊಂಡು ಕೆಲಸ ಆರಂಭಿಸಿ’ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.