ಶ್ರೀರಂಗಪಟ್ಟಣ: ತಾಲ್ಲೂಕು ಆಡಳಿತ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಿನಿ ವಿಧಾನಸೌಧದ ಎದುರು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಅವರ ನೇತೃತ್ವದಲ್ಲಿ ಅರ್ಧ ತಾಸು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಬಳಿ ಸಿಡಿಎಸ್ ನಾಲಾ ಖರಾಬು ಜಾಗ ಒತ್ತುವರಿ ಮಾಡಿಕೊಂಡಿದ್ದು ದಲಿತರು ತಮ್ಮ ಜಮೀನಿಗೆ ಹೋಗಲು ತೊಂದರೆಯಾಗಿದೆ. ಒತ್ತುವರಿ ತೆರವುಗೊಳಿಸಿ ಬಂಡಿ ಜಾಡು ಮಾಡಿಕೊಡಬೇಕು. ಕೆ.ಶೆಟ್ಟಹಳ್ಳಿ ಗ್ರಾಮದ ದಲಿತ ಮಹಿಳೆ ಮಹದೇವಮ್ಮ ಅವರ ಮನೆ ಮಳೆಯಿಂದ ಕುಸಿದಿದ್ದು, ಮನೆ ನಿರ್ಮಾಣಕ್ಕೆ ಅನುದಾನ ಕೊಡಿಸಬೇಕು. ತಾಲ್ಲೂಕಿನ ಮೊಗರಹಳ್ಳಿಯ ಸ.ನಂ. 128ರಲ್ಲಿ11 ಎಕರೆ 28 ಗುಂಟೆ ಸರ್ಕಾರಿ ಜಾಗದಲ್ಲಿ ಬಡ ಜನರಿಗೆ ನಿವೇಶನ ವಿತರಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಲಂಚಗುಳಿತನ ತಡೆಗಟ್ಟಬೇಕು ಎಂದು ವೆಂಕಟಗಿರಿಯಯ್ಯ ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಶಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ದಲಿತರಿಗೆ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ದಲಿತ ಕಾಲೊನಿಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಕುವೆಂಪು ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಆನಂದ್, ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ, ತಾಲ್ಲೂಕು ಘಟಕದ ಅಧ್ಯಕ್ಷ ಕರಿಯಪ್ಪ, ನಗರ ಘಟಕದ ಅಧ್ಯಕ್ಷ ರಂಗಸ್ವಾಮಿ, ಚಿನ್ನೇನಹಳ್ಳಿ ಕರಿಯಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.