ADVERTISEMENT

ಕೆಮ್ಮಣ್ಣು ನಾಲೆ 4 ತಿಂಗಳಲ್ಲಿ ಆಧುನೀಕರಣ: ಶಾಸಕ ಕೆ.ಎಂ.ಉದಯ್

ಸಭೆಯಲ್ಲಿ ರೈತರ ಸಹಕಾರ ಕೋರಿದ ಶಾಸಕ ಕೆ.ಎಂ.ಉದಯ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 13:59 IST
Last Updated 23 ಜನವರಿ 2025, 13:59 IST
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಮದ್ದೂರಮ್ಮ ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಭೆ ನಡೆಯಿತು
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಮದ್ದೂರಮ್ಮ ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಭೆ ನಡೆಯಿತು   

ಮದ್ದೂರು: ‘ತಾಲ್ಲೂಕಿನ ದೇಶಹಳ್ಳಿಯ ಮದ್ದೂರಮ್ಮನವರ ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ಕೆಮ್ಮಣ್ಣು ನಾಲೆಯ ಆಧುನೀಕರಣ ಕಾಮಗಾರಿಯನ್ನು 4 ತಿಂಗಳಿನಲ್ಲಿ ಪೂರ್ಣಗೊಳಿಸಲು ರೈತರು ಸಹಕರಿಸಬೇಕು’ ಎಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮದ್ದೂರಮ್ಮ ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮುಂದಿನ ನಾಲ್ಕು ತಿಂಗಳಲ್ಲಿ ಬೆಳೆ ಬೆಳೆಯಲು ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡು ಕೆಮ್ಮಣ್ಣು ನಾಲೆಯ ಆಧುನೀಕರಣ ಮಾಡಲಾಗುವುದು. ಇದಕ್ಕೆ ರೈತರು ಅಗತ್ಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು. ಅದಕ್ಕೆ ರೈತರು ಸಮ್ಮತಿ ಸೂಚಿಸಿದರು.

ADVERTISEMENT

‘ಕೆಮ್ಮಣ್ಣು ನಾಲೆಯ ಆಧುನೀಕರಣ ಮಾಡಲು ಸರ್ಕಾರ ₹90 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಿದ್ದು, ಟೆಂಡರ್ ಹಂತದಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಂಡು ಕೆಮ್ಮಣ್ಣು ನಾಲೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದರು.

‘ಮದ್ದೂರಮ್ಮನ ಕೆರೆ ನೀರನ್ನು 17 ಗ್ರಾಮಗಳ ಜನರು ಆಶ್ರಯಿಸಿದ್ದಾರೆ. ಕೆಮ್ಮಣ್ಣು ನಾಲೆಗೆ ತ್ಯಾಜ್ಯ ಹಾಕುವುದು, ಒಳಚರಂಡಿ ನೀರು ಹರಿಯುವುದು ಸೇರಿದಂತೆ ಅನೇಕ ಕಾರಣದಿಂದ ನಾಲೆಯ ಕೊನೇ ಭಾಗಕ್ಕೆ ನೀರು ಹರಿಯದೆ ರೈತರಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದಿದ್ದರಿಂದ ಅನುದಾನಕ್ಕೆ ಅನುಮೋದನೆ ಸಿಕ್ಕಿದೆ’ ಎಂದು ಹೇಳಿದರು.

‘ಕೆಮ್ಮಣ್ಣು ನಾಲೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಕವರ್ ಡೆಕ್, ನಾಲೆಯ‌ ಎರಡು ಬದಿ ಸಿಸಿ ಚರಂಡಿ, ಪೈಪ್‌ಲೈನ್, ರಕ್ಷಣಾ ತಡೆಗೋಡೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು’ ಎಂದರು.

‘ಪಟ್ಟಣದ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ಸರಿಪಡಿಸಲು ₹16.50 ಕೋಟಿ ಬಿಡುಗಡೆಯಾಗಿದ್ದು, ಆದರ ಕಾಮಗಾರಿಯು ಶೀಘ್ರವಾಗಿ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.

ಕಾವೇರಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ನಾಗರಾಜು, ಉಪ ತಹಶೀಲ್ದಾರ್ ಸೋಮಶೇಖರಯ್ಯ, ರೈತ ಮುಖಂಡರಾದ ದೇಶಹಳ್ಳಿ ಮೋಹನ್ ಕುಮಾರ್, ನ.ಲಿ. ಕೃಷ್ಣ, ಲಕ್ಷ್ಮಣ್‌ ಚನ್ನಸಂದ್ರ, ರಾಮಯ್ಯ, ಮಹೇಶ್, ಅಜ್ಜಹಳ್ಳಿ ರಾಮಕೃಷ್ಣ, ಎಂ‌.ಬಿ.ಸಚಿನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.