
ಕಿಕ್ಕೇರಿ: ಮಕ್ಕಳ ವ್ಯಾವಹಾರಿಕ ಜ್ಞಾನ ವೃದ್ಧಿಸಲು ಮಕ್ಕಳ ಸಂತೆ ಸಹಕಾರಿ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕಾರಿಗಾನಹಳ್ಳಿ ಪುಟ್ಟೇಗೌಡ ಹೇಳಿದರು.
ಹೋಬಳಿಯ ಗಡಿಭಾಗದ ಕಾರಿಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಮಕ್ಕಳ ಸಂತೆಯಲ್ಲಿ ಅವರು ಮಾತನಾಡಿದರು. ಮಕ್ಕಳು ಕೇವಲ ಅಂಕಗಳಿಸಿದರೆ ಸಾಲದು, ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನವನ್ನಾದರೂ ಕಲಿಯಬೇಕು. ಸುತ್ತಮುತ್ತಲ ದೈನಂದಿನ ಬದುಕಿಗೆ ಬೇಕಿರುವ ಸಾಮಾನು, ಸರಂಜಾಮು ಖರೀದಿಸುವ ಜ್ಞಾನ ಬೇಕಿದೆ. ಮಕ್ಕಳ ಸಂತೆ ಮಕ್ಕಳಿಗೆ, ಪೋಷಕರಿಗೆ ಖುಷಿ ಕೊಡುವ ಜೊತೆಗೆ ಹಣಕಾಸಿನ ವ್ಯವಹಾರವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಕಲಿಸಲು ಶಿಕ್ಷಕರು ಮುಂದಾಗಿರುವುದು ಸಂತಸ ತಂದಿದೆ ಎಂದರು.
ಮಕ್ಕಳು ತಂದು ಜೋಡಿಸಿಟ್ಟಿದ್ದ ವಸ್ತುಗಳನ್ನು ಪೋಷಕರು ಖುಷಿಯಿಂದ ಚೌಕಾಸಿ ಮಾಡುತ್ತ, ರೇಗಿಸುತ್ತ ಖರೀದಿಸಿದರು. ಮಕ್ಕಳು ಜೋರಾಗಿ ಕೂಗುತ್ತ ಒಂದು ತೆಗೆದುಕೊಂಡರೆ ಮತ್ತೊಂದು ಫ್ರೀ ಎಂದು ಗ್ರಾಹಕರನ್ನು ಕರೆಯುತ್ತಿದ್ದರು. ಚುರುಮುರಿ, ಸೌತೆಕಾಯಿ, ಕಲ್ಲಂಗಡಿ, ತರಕಾರಿ, ಜ್ಯೂಸ್, ಬಜ್ಜಿ, ಬೋಂಡಾದಂತಹ ವಿವಿಧ ವಸ್ತುಗಳನ್ನು ತಂದು ಖುಷಿಯಿಂದ ವ್ಯಾಪಾರ ಮಾಡಿದರು. ನಿಖರವಾಗಿ ತಕ್ಕಡಿಯಿಂದ ತೂಗಿ ವಸ್ತುಗಳನ್ನು ಬಟ್ಟೆಬ್ಯಾಗ್‌ನಲ್ಲಿ ತುಂಬಿ ಕೊಟ್ಟು ಪರಿಸರ ಪ್ರೇಮ ಮೆರೆದರು.
ಶಿಕ್ಷಕರಾದ ಜಿ.ಕೆ. ಸ್ವಾಮಿ, ಜಯಕುಮಾರ್, ಸಿ. ದೇವರಾಜು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.