ADVERTISEMENT

‘ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿಲ್ಲ, ಕ್ಷೇತ್ರದಲ್ಲೇ ಇದ್ದೀನಿ‘: ಶಾಸಕ ಉದಯ್‌

ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:29 IST
Last Updated 6 ಸೆಪ್ಟೆಂಬರ್ 2025, 2:29 IST
ಉದಯ್‌ ಕೆ.ಎಂ.
ಉದಯ್‌ ಕೆ.ಎಂ.   

ಮದ್ದೂರು: ‘ನನಗೆ ಇಬ್ಬರು, ಮೂವರು ಪತ್ನಿಯರಿಲ್ಲ. ನಾನು ಯಾರ ಜೊತೆನೂ ಸಂಬಂಧ ಇಟ್ಟುಕೊಂಡು ಹೈಟೆಕ್ ಫೈವ್‌ ಸ್ಟಾರ್ ಹೋಟೆಲ್‌ನಲ್ಲಿ ಕುಳಿತುಕೊಂಡಿಲ್ಲ. ನಾನು ಕ್ಷೇತ್ರದಲ್ಲೇ ಇದ್ದೀನಿ. ಪ್ರತಿನಿತ್ಯ ಜನಸೇವೆ ಮಾಡುತ್ತಾ ಇದ್ದೀನಿ. ನಾನೇಲ್ಲೂ ಓಡಿ ಹೋಗಿಲ್ಲ’ ಎಂದು ಶಾಸಕ ಕೆ.ಎಂ. ಉದಯ್ ಅವರು ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. 

ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಅವರ ಮೇಲೆ ಇಡಿ ದಾಳಿ ನಡೆದಾಗಿನಿಂದ ಮದ್ದೂರಿನ ಶಾಸಕ ಕೆ.ಎಂ. ಉದಯ್ ಕ್ಷೇತ್ರದಲ್ಲಿ ಕಾಣೆಯಾಗಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು. 

ಶುಕ್ರವಾರ ಮಾಧ್ಯಮದವರ ಜೊತೆ ಉದಯ್‌ ಮಾತನಾಡಿ, ‘ನನ್ನನ್ನು ಟೀಕಿಸುವವರು ಏನು ಮಹಾರಾಜರ ವಂಶಸ್ಥರಾ? ಇವರಿಗೆ ಯೋಗ್ಯತೆ ಏನಿತ್ತು? ಇವರ ಆಸ್ತಿ ಎಷ್ಟಿತ್ತು? ಇವಾಗ ಇವರ ಆಸ್ತಿಗಳು ಎಷ್ಟಿವೆ? ಮೂಟೆ ಹೊತ್ತು, ಗುಂಡಿ ತೆಗೆದು ಸಂಪಾದನೆ ಮಾಡಿದ್ದಾರಾ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. 

‘ಎರಡು ತಿಂಗಳಿಂದ ಮಂಡ್ಯ ಸಂಸದರು ಕಾಣುತ್ತಲೇ ಇಲ್ಲ. ಕೇಂದ್ರ ಮಂತ್ರಿಯಾಗಿ ಮಂಡ್ಯಕ್ಕೆ ಇವರ ಕೊಡುಗೆ ಏನು. ನಾನು ನಾಲ್ಕು ವರ್ಷಗಳಿಂದ ನನ್ನ ವ್ಯವಹಾರ, ವಹಿವಾಟು ನಿಲ್ಲಿಸಿ, ಜನಸೇವೆ ಮಾಡೋದಕ್ಕೆ ಬಂದಿದ್ದೇನೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.