ADVERTISEMENT

ಅಭಿವೃದ್ಧಿಯ ಕಾಯಕಲ್ಪಕ್ಕೆ ಕಾದಿರುವ ಕೆ.ಆರ್‌.ಪೇಟೆ

ಉತ್ತಮ ರಸ್ತೆ, ಒಳಚರಂಡಿ, ಉದ್ಯಾನ ನಿರ್ಮಿಸಲು ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 4:41 IST
Last Updated 15 ಡಿಸೆಂಬರ್ 2025, 4:41 IST
ಕೆ.ಆರ್‌.ಪೇಟೆ ಪಟ್ಟಣಕ್ಕೆ ಬರುವ ಜನರನ್ನು ಸ್ವಾಗತಿಸುತ್ತಿರುವ ಮೈಸೂರು–ಚನ್ನರಾಯಪಟ್ಟಣ ರಸ್ತೆ ಬದಿಯ ಕಸದ ರಾಶಿ  
ಕೆ.ಆರ್‌.ಪೇಟೆ ಪಟ್ಟಣಕ್ಕೆ ಬರುವ ಜನರನ್ನು ಸ್ವಾಗತಿಸುತ್ತಿರುವ ಮೈಸೂರು–ಚನ್ನರಾಯಪಟ್ಟಣ ರಸ್ತೆ ಬದಿಯ ಕಸದ ರಾಶಿ     

ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್‌.ಪೇಟೆ ತಾಲ್ಲೂಕು 2.70 ಲಕ್ಷ ಜನಸಂಖ್ಯೆ ಹೊಂದಿದ್ದು ದೊಡ್ಡ ತಾಲ್ಲೂಕು ಎನಿಸಿದೆ. ಆದರೆ, ಮೂಲಸೌಕರ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದೆ ಎಂಬ ಆರೋಪ ಇಲ್ಲಿನ ಜನರದ್ದು. 

ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ಜನ ವಾಸವಿದ್ದರೂ ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ಮಾತ್ರ ಹಿಂದೆ ಬಿದ್ದಿದ್ದು, ದೊಡ್ಡ ಹಳ್ಳಿಯಂತೆಯೇ ಕಾಣುತ್ತಿರುವುದು ಮಾತ್ರ ವಿಪರ್ಯಾಸ. 

ಪಟ್ಟಣದಲ್ಲಿರುವ ಬಹುತೇಕ ಬಡಾವಣೆಗಳ ರಸ್ತೆಗಳು ಕಿರಿದಾಗಿರುವುದು ಮಾತ್ರವಲ್ಲ ಡಾಂಬರು ಇಲ್ಲದೆ ಹಳ್ಳಿಯ ರಸ್ತೆಗಳಿಗಿಂತಲೂ ಕಡೆಯಾಗಿವೆ. ರಸ್ತೆಗಳು ಹೊಂಡ– ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. 

ADVERTISEMENT

ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಮ್ಯಾನ್ ಹೋಲ್‌ಗಳು ಬಾಯಿ ತೆರೆದಿವೆ. ಚರಂಡಿಯಲ್ಲಿ ಹೂಳು ತುಂಬಿಕೊಂಡ ಪರಿಣಾಮ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿವೆ. ಕುಡಿಯುವ ನೀರಿನ ಪೈಪ್‌ಗಳು ಒಡೆದು ನೀರು ರಸ್ತೆಯಲೆಲ್ಲಾ ಹರಿದು ಜನರ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ. 

ಉದ್ಯಾನಗಳ ಕೊರತೆ: ಇಡೀ ಪಟ್ಟಣಕ್ಕೆ ಹೇಳಿಕೊಳ್ಳುವಂತಹ ಒಂದೇ ಒಂದು ಉದ್ಯಾನ ಇಲ್ಲ. ವಿಶ್ರಮಿಸಲು ಜಾಗವಿಲ್ಲ. ಮುಂಜಾನೆ, ಸಂಜೆ ವಾಕ್ ಮಾಡಲು ಹೆದ್ದಾರಿ, ಶಾಲಾ– ಕಾಲೇಜು ಮೈದಾನವನ್ನೇ ನಾಗರಿಕರು ಅವಲಂಬಿಸಿದ್ದಾರೆ.

ಪಟ್ಟಣದಲ್ಲಿ ಹಾದುಹೋಗುವ ಮೈಸೂರು– ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿಯೇ ಎಪಿಎಂಸಿ ಮಾರುಕಟ್ಟೆ, ಶಾಲಾ ಕಾಲೇಜುಗಳು, ಆಸ್ಪತ್ರೆ, ಬ್ಯಾಂಕ್, ನ್ಯಾಯಾಲಯ ಸಂಕೀರ್ಣಗಳು ಇದ್ದು ಈ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ.

ರಸ್ತೆ ದಾಟುವುದೇ ಕಷ್ಟ: ಗ್ರಾಮಭಾರತಿ ಶಾಲೆ ವೃತ್ತದಿಂದ ಪ್ರವಾಸಿಮಂದಿರ ವೃತ್ತದವರೆವಿಗೆ ಪಾದಚಾರಿಗಳು ಮತ್ತು ಬೈಕ್‌ ಸವಾರರು ಸಂಚರಿಸಲು ಕಷ್ಟವಾಗಿದೆ. ಆ ಬದಿಯಿಂದ ಈ ಬದಿಗೆ ರಸ್ತೆ ದಾಟಲು ಹರಸಾಹಸ ಪಡಬೇಕಿದೆ. ಚನ್ನರಾಯಪಟ್ಟಣ - ಮೈಸೂರು ರಾಜ್ಯ ಹೆದ್ದಾರಿಯನ್ನು ಮನ್‌ಮುಲ್‌ ಹಾಲು ಸಂಗ್ರಹಣಾ ಕೇಂದ್ರದಿಂದ ಟೌನ್ ಕ್ಲಬ್ ವೃತ್ತ ಬಳಸಿ ಪುರ ಗೇಟ್‌ವರೆವಿಗೆ ಚತುಷ್ಪಥ ರಸ್ತೆ ಮಾಡಬೇಕು ಎಂಬ ಸಾರ್ವಜನಿಕರ ಆಗ್ರಹ ಅರಣ್ಯರೋದನವಾಗಿದೆ.

ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ದುರ್ಗಾಭವನ್ ವೃತ್ತದವರೆವಿಗೆ ಮುಖ್ಯ ರಸ್ತೆ, ಹೊಸ ಮತ್ತು ಹಳೇ ಕಿಕ್ಕೇರಿ ರಸ್ತೆಯಲ್ಲಿ ಫುಟ್‌ಪಾತ್‌ ನಿರ್ಮಾಣವಾಗಬೇಕು. ಬೀದಿ ಬದಿಯ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಯಾಗಬೇಕೆಂದು ಪುರಸಭಾ ಸದಸ್ಯ ಎಚ್.ಆರ್. ಲೋಕೇಶ್ ಒತ್ತಾಯಿಸುತ್ತಾರೆ.

ಮಳೆ ಬಂದರೆ ಕೆರೆಯಂತಾಗುವ ಬಸ್‌ ನಿಲ್ದಾಣ  ನಗರದ ಒಳರಸ್ತೆಗಳಲ್ಲಿ ಗುಂಡಿಗಳ ಕಾರುಬಾರು ಒಳಚರಂಡಿ ಅವ್ಯವಸ್ಥೆಯಿಂದ ದುರ್ನಾತ 

ರಸ್ತೆಗಳಿಗೆ ನಾಮಫಕಗಳೇ ಇಲ್ಲ!

‘ಪಟ್ಟಣದಲ್ಲಿ ಬಡಾವಣೆಯ ರಸ್ತೆಗಳನ್ನು ಗುರುತಿಸಲು ಸರಿಯಾಗಿ ನಾಮಫಲಕಗಳೇ ಇಲ್ಲ. ಅಡ್ಡರಸ್ತೆ ಸಂಖ್ಯೆ ನಮೂದಿಸುವ ಬೋರ್ಡ್‌ಗಳಿಲ್ಲ ಕೊನೆಗೆ ಮನೆಗಳಿಗೆ ನಂಬರ್ ಕೊಡುವ ಕೆಲಸವನ್ನೂ ಪುರಸಭೆ ಮಾಡಿಲ್ಲ. ಹಾಗಾಗಿ ಹೊರಗಡೆಯಿಂದ ಬಂದವರಿಗೆ ಮನೆ ಹುಡುಕುವುದೇ ದೊಡ್ಡ ಸಮಸ್ಯೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪುರಸಭೆಯವರು ಗಮನಕ್ಕೆ ತೆಗೆದುಕೊಂಡಿಲ್ಲ. ಜನ ಹಿಡಿ ಶಾಪಹಾಕಿದರೂ ಎಚ್ಚೆತ್ತಂತೆ ಕಾಣುತ್ತಿಲ್ಲ’ ಎಂದು ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ.ಎಸ್. ಶಿವಪ್ಪ ದೂರಿದ್ದಾರೆ.

‘ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ’

‘ಪಟ್ಟಣದ ಸಾರಿಗೆ ಬಸ್ ನಿಲ್ದಾಣ ದೊಡ್ಡ ಮಳೆ ಬಂದರೆ ಕೆರೆಯಾಗುತಿದ್ದು ಇದುವರೆಗೆ ಪರಿಹಾರ ಸಿಕ್ಕಿಲ್ಲ. ತಾಲ್ಲೂಕು ಕ್ರೀಡಾಂಗಣದ ಹೊರಾಂಗಣವನ್ನು ಹಚ್ಚಹಸಿರುಗೊಳಿಸುವ ಪ್ರಯತ್ನ ನಡೆದಿಲ್ಲ. ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದೇ ಕಾರಣ’ ಎಂದು ಪಟ್ಟಣದ ನಿವಾಸಿ ರೈತಸಂಘದ ಮುಖಂಡ ಮರುವನಹಳ್ಳಿ ಶಂಕರ್ ಆರೋಪಿಸಿದ್ದಾರೆ. 

₹25 ಕೋಟಿ ಅನುದಾನಕ್ಕೆ ಮನವಿ’

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುದಾನದ ಕೊರತೆಯಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಹೇಳುತ್ತಾರೆ. ಪಟ್ಟಣದ ಬಡಾವಣೆಗಳ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ₹25 ಕೋಟಿ ಅನುದಾನ ಒದಗಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದು ಸ್ಪಂದಿಸುವ ಭರವಸೆ ಇದೆ. ಅನುದಾನ ಬಂದರೆ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ಶಾಸಕ ಎಚ್.ಟಿ. ಮಂಜು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.