
ಕೆ.ಆರ್.ಪೇಟೆ: ‘ಸಾಮಾಜಿಕ ಮೌಲ್ಯಗಳು ಪತನವಾಗುತ್ತಿರುವ ಈ ದಿನಗಳಲ್ಲಿ ಜನರಲ್ಲಿ ನೈತಿಕತೆ ಮತ್ತು ಪರಂಪರೆಯ ಜ್ಞಾನವನ್ನು ಮೂಡಿಸಲು ಪೌರಾಣಿಕ ನಾಟಕಗಳು ಸಹಕಾರಿಯಾಗಿವೆ’ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಶ್ರೀರಂಗ ಚಿತ್ರಮಂದಿರ ಆವರಣದಲ್ಲಿ ಡಾ.ರಾಜ್ ರಂಗ ಕಲಾ ವೇದಿಕೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ 23 ದಿನಗಳ ಪೌರಾಣಿಕ ಮತ್ತು ಸಾಮಾಜಿಕ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನಾಟಕೋತ್ಸವಗಳು ಪ್ರತಿಭೆಗಳನ್ನು ಹೊರತರುವ ವೇದಿಕೆಯಾಗಿದ್ದು, ಯುವಕರ ನಡವಳಿಕೆಯಲ್ಲಿ ಬದಲಾವಣೆ ತರಬಲ್ಲವುಗಳಾಗಿವೆ. ನಮ್ಮ ಇತಿಹಾಸ, ಪರಂಪರೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗಿವೆ. ಕಲಾವಿದರ ಸಂಘವು ನಗರದಲ್ಲಿ ನಾಟಕೋತ್ಸವ ಆಯೋಜಿಸುವ ಮೂಲಕ ಗ್ರಾಮೀಣ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡುತ್ತಿರುವುದು ಸಂತಸದ ವಿಚಾರವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಮೊಬೈಲ್ ಮತ್ತು ಟೀವಿಗಳಿಂದ ನಮ್ಮ ಸಂಸ್ಕೃತಿಯ ಬಿಂಬವಾಗಿರುವ ನಾಟಕಗಳು ಮರೆಯಾಗುತಿದ್ದು, ಅದನ್ನು ಉಳಿಸಿ ಬೆಳೆಸಲು ಇಂತಹ ನಾಟಕೋತ್ಸವಗಳು ನೆರವಾಗಲಿವೆ. ಸಾಂಸ್ಕೃತಿಕ ಚಟುವಟಿಕೆ ನಡೆಸಲು ಪಟ್ಟಣದ ಹೃದಯ ಭಾಗದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನವನ್ನು ಗುರುತಿಸಿದ್ದು, ಭವ್ಯ ಕನ್ನಡ ಭವನ ನಿರ್ಮಾಣ ಮಾಡಲು ಶ್ರಮಿಸುವದಾಗಿ ತಿಳಿಸಿದರು.
ನಾಟಕೋತ್ಸವದ ಮೊದಲ ದಿವಸ ಕಿಕ್ಕೇರಿ ಜೈಭುವನೇಶ್ವರಿ ಯುವ ಕಲಾವಿದರ ಸಂಘದಿಂದ ನಡೆದ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ’ ನಾಟಕ ಜನರ ಮನಸೂರೆಗೊಂಡಿತು.
ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಪ್ರಮುಖರಾದ ದಿಲೀಪ್ ಕುಮಾರ್, ಸಣ್ಣನಿಂಗೇಗೌಡ, ಶೀಳನೆರೆ ಸಿದ್ದೇಶ್, ಬಳ್ಳೆಕೆರೆ ಮಂಜುನಾಥ್, ಶ್ಯಾಮ್ ಪ್ರಸಾದ್, ಚಟ್ಟೆನಹಳ್ಳಿ ನಾಗರಾಜ್, ಡಾ. ರಾಜ್ ರಂಗಕಲಾ ಸಂಘದ ಅಧ್ಯಕ್ಷ ಮುದ್ದನಹಳ್ಳಿ ದೇವರಾಜು, ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು, ಖಜಾಂಚಿ ಮರಟಿಕೊಪ್ಪಲು, ಸಂಘಟನಾ ಕಾರ್ಯದರ್ಶಿ ಹೊಸಹೊಳಲು ರಘು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.