ಕೆ.ಆರ್.ಪೇಟೆ: ಹೇಮಾವತಿಯ ಬಲ ಮತ್ತು ಎಡದಂಡೆ ನಾಲೆಗಳಿಗೆ ಜಲಾಶಯದಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮತ್ತು ಮುಖಂಡರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಕೆ.ಆರ್. ಪೇಟೆಯ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟಿಸಿ ಸರ್ಕಾರ ಮತ್ತು ನೀರಾವರಿ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ, ‘ಸರ್ಕಾರ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ವಾಸ್ತವ ಮನವರಿಕೆ ಮಾಡಿಕೊಂಡು ರೈತರ ಹಿತ ಕಾಯಲು ಮುಂದಾಗಬೇಕು. ನಾಲೆಗಳಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವದು ರೈತರಿಗೆ ಬಗೆದ ದ್ರೋಹವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹೇಮಾವತಿ ಅಣೆಕಟ್ಟೆಯಲ್ಲಿ ದಾಖಲೆಯ ಪ್ರಮಾಣದ ನೀರು ಇದ್ದರೂ ಬಿಡದಿರುವುದು ರೈತರಿಗೆ ಬಗೆದ ದ್ರೋಹವಾಗಿದೆ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಮ್ ಆಕ್ರೋಶ ಹೊರಹಾಕಿದರು.
ರೈತರ ಮನವಿ ಆಲಿಸಿದ ತಹಶೀಲ್ದಾರ್ ಅಶೋಕ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಈ ಸಂಬಂಧ ಮಾರ್ಚ್ 4 ಮತ್ತು 5ರಂದು ಜಲಾಶಯದ ಮುಖ್ಯ ಎಂಜಿನಿಯರ್ ಅವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಲ್.ಬಿ. ಜಗದೀಶ್, ಬೂಕನಕೆರೆ ನಾಗರಾಜು, ಕರೋಟಿ ತಮ್ಮಯ್ಯ, ಸಿಂದಘಟ್ಟ ಮುದ್ದುಕುಮಾರ್, ಚೌಡೇನಹಳ್ಳಿ ಕೃಷ್ಣೆಗೌಡ ,ನಾರಾಯಣ ಸ್ವಾಮಿ, ಲಕ್ಷ್ಮಿಪುರ ನಾಗರಾಜು, ಲಿಂಗಾಪುರ ರೇವಣ್ಣ, ಹಿರಿಕಳಲೆ ಬಸವರಾಜು, ನೀತಿಮಂಗಲ ಮಹೇಶ್, ಹೆಗ್ಗಡಹಳ್ಳಿ ಚೇತನ್, ಮರುವನಹಳ್ಳಿ ಮಹೇಶ್ ಭಾಗವಹಿಸಿದ್ದರು.
ಫೆ.28ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಬರಿದಾದ ಕೆರೆಕಟ್ಟೆ: ಬತ್ತಿದ ಅಂತರ್ಜಲ’ ವಿಶೇಷ ವರದಿಯನ್ನು ಪ್ರತಿಭಟನಾ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.