ADVERTISEMENT

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡು ಪಾಂಡು ಇಲ್ಲ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 10:18 IST
Last Updated 19 ಸೆಪ್ಟೆಂಬರ್ 2019, 10:18 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ಗೆ ಸಚಿವ ವಿ. ಸೋಮಣ್ಣ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ಗೆ ಸಚಿವ ವಿ. ಸೋಮಣ್ಣ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು   

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡು ಪಾಂಡು ಮಾಡಲ್ಲ. ನಾವು ಬೆಂಗಳೂರಿನವರು, ಮೇಲಾಗಿ ಕರ್ನಾಟಕದ ಜನ. ನಮ್ಮ ರಾಜ್ಯಕ್ಕೆ ಹೆಂಗೆ ಬೇಕೋ ಹಂಗೆ ಅಭಿವೃದ್ಧಿ ಮಾಡ್ತೀವಿ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ತಾಲ್ಲೂಕಿನ ಕೆಆರ್‌ಎಸ್‌ಗೆ ಬುಧವಾರ ಭೇಟಿ ನೀಡಿದ್ದ ಅವರು ಮಾತನಾಡಿದರು.

‘ಡಿಸ್ನಿಲ್ಯಾಂಡ್‌ ನನ್ನ ತಲೆಯಲ್ಲಿಲ್ಲ. ಹಾಗೆ ಹೇಳಿದ್ದವರಿಗೆ ಕೋಟಿ ನಮಸ್ಕಾರ. ಮುಂದಿನ ದಿನಗಳಲ್ಲಿ ಕೆಆರ್‌ಎಸ್‌ ದೊಡ್ಡ ಪ್ರವಾಸಿ ತಾಣವನ್ನಾಗಿ ಮಾಡುವ ಚಿಂತನೆ ಇದೆ. ಕೆಆರ್‌ಎಸ್‌ನಂತೆ ಕಬಿನಿಗೂ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ₹65 ಕೋಟಿ ಮೀಸಲಿಟ್ಟಿದೆ’ ಎಂದರು.

ADVERTISEMENT

‘ಶ್ರೀರಂಗಪಟ್ಟಣ ದಸರಾ ಸಿದ್ಧತೆ ಕುರಿತು ಅಧಿಕಾರಿಗಳು ಹಾಗೂ ಶಾಸಕರ ಜತೆ ಚರ್ಚಿಸಿದ್ದೇನೆ. ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ, ರಸ್ತೆ ಪಕ್ಕದ ಜಂಗಲ್ ಸ್ವಚ್ಛತೆ ಮಾಡಲಾಗುವುದು. ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಕೆಆರ್‌ಎಸ್‌ನಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಪ್ರಸ್ತಾವ ಕೊಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶಾಸಕ ಸಿ.ಎಸ್‌. ಪುಟ್ಟರಾಜು, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಸಿಇಒ ಯಾಲಕ್ಕಿಗೌಡ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಶಂಕರೇಗೌಡ, ಅಧೀಕ್ಷಕ ಎಂಜಿನಿಯರ್‌ ವಿಜಯಕುಮಾರ್‌, ತಹಶೀಲ್ದಾರ್‌ ಡಿ. ನಾಗೇಶ್‌, ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.