ADVERTISEMENT

ಮೇಲುಕೋಟೆ | ಸೌಲಭ್ಯಗಳ ಕೊರತೆ– ದರ್ಶನ ದುಬಾರಿ

ಮೇಲುಕೋಟೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ; ಮುಜರಾಯಿ ಇಲಾಖೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 6:32 IST
Last Updated 10 ಜನವರಿ 2024, 6:32 IST
ರಾಯಗೋಪುರ ಚಿತ್ರ
ರಾಯಗೋಪುರ ಚಿತ್ರ   

ಮೇಲುಕೋಟೆ: ದಕ್ಷಿಣ ಭಾರತದ ಬದರಿನಾಥ ಎಂದೇ ಹೆಸರುವಾಸಿಯಾದ ಮೇಲುಕೋಟೆಗೆ ಬರುವ ಭಕ್ತರು ಹಾಗೂ ಅವರಿಂದ ಸಂಗ್ರಹವಾಗುವ ಆದಾಯಕ್ಕೆ ಕೊರತೆ ಇಲ್ಲ. ಆದರೆ ಕ್ಷೇತ್ರದ ದರ್ಶನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಪ್ರವಾಸಿಗರಿಗೆ ಸೌಲಭ್ಯಗಳೂ ಮರೀಚಿಕೆಯಾಗಿ ಉಳಿದಿದೆ.

ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಮೇಲುಕೋಟೆ ಕೂಡ ಒಂದು. ಪ್ರವಾಸಿಗರಿಗೆ ಅಚ್ಚರಿ ಎನಿಸುವ ರಾಯಗೋಪುರ, ಶ್ರೀರಾಮಚಂದ್ರ ಸೀತಾಮಾತೆ ವನವಾಸಕ್ಕೆ ಬಂದಾಗ ನಡೆದ ಪವಾಡಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಧನುಷ್ಕೋಟಿ, ಕೈಸಾಲೆ ದೇವಾಲಯ ಹಾಗೂ ಮಂಟಪಗಳಿಂದ ಕೂಡಿರುವ ಪಂಚಕಲ್ಯಾಣಿ‌, ಅಕ್ಕತಂಗಿ ಕೊಳವು ಸೇರಿದಂತೆ ಹಲವು ಪ್ರವಾಸಿ ತಾಣಗಳು ಇಲ್ಲಿವೆ. ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಕ್ಷೇತ್ರಕ್ಕೆ ವಾರ್ಷಿಕ ಲಕ್ಷಕ್ಕೂ ಅಧಿಕ ಅನುದಾನ ಹಾಗೂ ಆದಾಯವೂ ಇದೆ. ಆದರೆ ಭಕ್ತರಿಗೆ ಬೇಕಾದ ವಸತಿ ಸೌಕರ್ಯಗಳಿಲ್ಲ. ಇದರಿಂದ, ಖಾಸಗಿ ವಸತಿಗೃಹ, ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಪರಿಸ್ಥಿತಿ ಎದುರಾಗಿದೆ. ನೂರಾರು ಕಿಲೋಮೀಟರ್ ದೂರದಿಂದ ಬರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಿಲ್ಲ. ಯೋಗಾನರಸಿಂಹ ಸ್ವಾಮಿ ಹಾಗೂ ಚೆಲುವ ನಾರಾಯಣ ಸ್ವಾಮಿ ದೇವಾಲಯಗಳಲ್ಲಿ ತೀರ್ಥ ಸಿಕ್ಕರಷ್ಟೆ ಪುಣ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ದೇವಾಲಯದ ಆದಾಯದದ ಮೇಲೆ ಕಣ್ಣಿಟ್ಟು ಕುಳಿತಿರುವ ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯೂ ಭಕ್ತರಿಗೆ ಕನಿಷ್ಠ ಸೌಕರ್ಯ  ಒದಗಿಸಲು ಮನಸ್ಸು ಮಾಡಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೀಗಿದ್ದರೂ ಕೂಡ ಪಾರ್ಕಿಂಗ್ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ಇಲ್ಲಿಗೆ ಭೇಟಿ ನೀಡಿದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ₹1 ಕೋಟಿ ವೆಚ್ಚದಲ್ಲಿ ಅನ್ನದಾಸೋಹ ಭವನ ಉದ್ಘಾಟನೆಯಾಗಿದ್ದು, ವರ್ಷ ಕಳೆದರೂ ಉಚಿತ ಅನ್ನದಾಸೋಹ ಆರಂಭವಾಗಿಲ್ಲ. ಹೀಗಾಗಿ, ಭಕ್ತರು ಖಾಸಗಿ ಹೋಟೆಲ್‌ಗಳಲ್ಲಿ ದುಬಾರಿ ಹಣ ನೀಡಿ ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉಚಿತ ಬಸ್ ವ್ಯವಸ್ಥೆ ಸ್ಥಗಿತ: ಸಿ.ಎಸ್. ಪುಟ್ಟರಾಜು ಅವರು ಸಚಿವರಾಗಿದ್ದ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿ ವೆಂಕಟೇಶ ಅವರೊಂದಿಗೆ ಚರ್ಚಿಸಿ, ಜಕ್ಕನಹಳ್ಳಿಯಿಂದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದವರೆಗೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಅದು ಕೆಲವೇ ದಿನಗಳಲ್ಲೇ ನಿಂತಿದೆ. ಯೋಗಾನರಸಿಂಹ ಸ್ವಾಮಿ ಬೆಟ್ಟದ ಹತ್ತಲು ವೃದ್ಧರು, ಅಂಗವಿಕಲರು ಏರಲು ಅಸಾಧ್ಯವಾದ ಸ್ಥಿತಿಯಿದೆ. ಹಲವು ಸಲ ದರ್ಶನ ಪಡೆಯದೇ, ಹಿಂತಿರುಗುತ್ತಿದ್ದಾರೆ.

ಮೇಲುಕೋಟೆ ಯೋಗಾನರಸಿಂಹ ಸ್ವಾಮಿ
ದರ್ಶನ್ ಪುಟ್ಟಣ್ಣಯ್ಯ ಶಾಸಕ ಮೇಲುಕೋಟೆ
ವೆಂಕಟರಾಮೇಗೌಡ

ಮೂಲ ಸೌಕರ್ಯದ ಕೊರತೆ; ಭಕ್ತರ ಬೇಸರ ವರ್ಷ ಕಳೆದರೂ, ಆರಂಭವಾಗದ ಅನ್ನದಾನ ವ್ಯವಸ್ಥೆ ಪಾರ್ಕಿಂಗ್‌ ಇಲ್ಲದಿದ್ದರೂ, ಶುಲ್ಕ ವಸೂಲಾತಿ

ಧಾರ್ಮಿಕ ಕ್ಷೇತ್ರಕ್ಕೆ ಬರುವಂತಹ ಭಕ್ತರಿಗೆ ಉಚಿತ ವಸತಿ ಹಾಗೂ ಅನ್ನ ದಸೋಹ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತಿಶೀಘ್ರದಲ್ಲೇ ದೇವಾಲಯ ಕಮಿಟಿ ರಚನೆಗೆ ಕ್ರಮ‌ಕೈಗೊಳ್ಳಲಾಗುವುದು
- ದರ್ಶನ್ ಪುಟ್ಟಣ್ಣಯ್ಯ ಶಾಸಕ ಮೇಲುಕೋಟೆ
ಕ್ಷೇತ್ರದ ಅಭಿವೃದ್ಧಿ ಸರ್ಕಾರಗಳ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಭಕ್ತರಿಗೆ ಆರ್ಥಿಕ ಹೊರೆಯಾಗದಂತೆ ಸರ್ಕಾರಗಳು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು-
ವೆಂಕಟರಾಮೇಗೌಡ ಕಸಾಪ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.