ADVERTISEMENT

ಲಕ್ಷ್ಮೀ ನಾರಾಯಣ ಬ್ರಹ್ಮ ರಥೋತ್ಸವ ಸಂಭ್ರಮ

ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:18 IST
Last Updated 25 ಫೆಬ್ರುವರಿ 2026, 6:18 IST
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು   

ಕೆ.ಆರ್.ಪೇಟೆ: ತಾಲ್ಲೂಕಿನ ಹೊಸಹೊಳಲು ಗ್ರಾಮದ ಪುರಾಣ ಪ್ರಸಿದ್ಧ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಸಡಗರ, ಸಂಭ್ರಮದಿಂದ ಜರುಗಿತು.

ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ ಹವನಗಳು ಶುಕ್ರವಾರದಿಂದಲೇ ಆರಂಭಗೊಂಡು ಮಂಗಳವಾರ ಬ್ರಹ್ಮ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಕಣ್ಮನ ಸೆಳೆಯುವ ಫಲಪುಷ್ಪಗಳಿಂದ ದೇವಸ್ಥಾನ ಮತ್ತು ರಥವನ್ನು ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಪೂಜಿಸಲಾಯಿತು. ಪ್ರಧಾನ ಅರ್ಚಕ ರಾಜಭಟ್ಟ ಮತ್ತು ವಿನಾಯಕ ಭಟ್ಟ ನೇತೃತ್ವದಲ್ಲಿ ವಿಧಿವಿಧಾನಗಳು ನಡೆದವು.  ಹೊಸಹೊಳಲು ಮತ್ತು ಕೆ.ಆರ್.ಪೇಟೆ ಗ್ರಾಮಸ್ಥರು, ಶಾಸಕ ಎಚ್.ಟಿ.ಮಂಜು, ಮುಜರಾಯಿ ಅಧಿಕಾರಿ, ತಹಶೀಲ್ದಾರ್ ಅಶೋಕ್ ಕುಮಾರ್, ಚುನಾಯಿತ ಜನಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರು ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ADVERTISEMENT

ರಥೋತ್ಸವ ಆರಂಭ ಆಗುತ್ತಿದ್ದಂತೆ ಭಕ್ತರು ‘ಗೋವಿಂದ ಗೋವಿಂದ...’ ‘ಉಘೇ ಲಕ್ಷ್ಮೀನಾರಾಯಣ, ಉಘೇ ಶ್ರೀನಿವಾಸ’ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು. ಭಕ್ತರು ಹಣ್ಣು ಮತ್ತು ಧವನಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು. ಕುರುಹಿನಶೆಟ್ಟಿ ಸಮಾಜದವರು ಮತ್ತು ಗ್ರಾಮಸ್ಥರು ಆಗಮಿಸಿದ್ದ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ಮತ್ತು ಪ್ರಸಾದವನ್ನು ವಿತರಿಸಿದರು.

ರಾಜಬೀದಿಯಲ್ಲಿ ಹರಿದ ರಥವನ್ನು ಪಾರ್ಶ್ವನಾಥ ಬಸದಿ ಬಳಿ ನಿಲ್ಲಿಸಲಾಯಿತು. ಸಂಜೆ ಮತ್ತೆ ದೇವಸ್ಥಾನಕ್ಕೆ ಎಳೆದು ತಂದು ಪೂಜೆ ಸಲ್ಲಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.