
ಮಂಡ್ಯ: ‘ಆಧುನಿಕ ಲೇಸರ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ಮಾಡುವ ಹೊಸ ಅಲೆ ಬರುತ್ತಿದ್ದು, ಈ ಶಸ್ತ್ರಚಿಕಿತ್ಸೆ ಪಡೆಯುವ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಹೇಳಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ, ಭಾರತ ಶಸ್ತ್ರಚಿಕಿತ್ಸಕರ ಸಂಘದ ಮಂಡ್ಯ ಶಾಖೆಯ ಸಹಯೋಗದಲ್ಲಿ ಶನಿವಾರ ನಡೆದ ‘ಲೇಸರ್ ಪ್ರೊಕ್ಟಾಲಜಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಲೇಸರ್ ತಂತ್ರಜ್ಞಾನವು ಹೊಸ ಅಲೆ ತರುವುದರ ಮೂಲಕ ಅದು ಪ್ರೋಕ್ಟಾಲಜಿ ಕ್ಷೇತ್ರದಲ್ಲಿ ಬಹುಬೇಗ, ಕಡಿಮೆ ನೋವಿನ ಮತ್ತು ಕಡಿಮೆ ರಕ್ತಸ್ರಾವದ ಶಸ್ತ್ರಚಿಕಿತ್ಸೆಗೆ ಮಾರ್ಗದರ್ಶನ ನೀಡುತ್ತದೆ. ಈ ಕಾರ್ಯಾಗಾರವು ಯುವ ಶಸ್ತ್ರಚಿಕಿತ್ಸಕರಿಗೆ ಅತ್ಯಾಧುನಿಕ ತಂತ್ರಜ್ಞಾನ ತಿಳಿದುಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ ಎಂದು ವಿವರಿಸಿದರು.
ಶಸ್ತ್ರ ಚಿಕಿತ್ಸಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಏನೆಲ್ಲಾ ಅನುಸರಿಸಬೇಕು ಎಂಬುದನ್ನು ತಿಳಿಸಿಕೊಡಲು ನುರಿತ ವೈದ್ಯರಿಂದ ಮಾಹಿತಿ ಕೊಡಿಸಲಾಗುತ್ತಿದೆ. ಹೊಸ ತಂತ್ರಜ್ಞಾನ ಬಂದಿರುವುದರಿಂದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೀಡಿ ಅವತ್ತಿನ ದಿನದಂದೇ ಮನೆಗೆ ಕಳುಹಿಸಬಹುದಾಗಿದೆ. ಇಲ್ಲಿ ರೋಗಿಗೆ ಯಾವುದೇ ನೋವು, ಸಂಕಟ ಕಾಣಿಸುವುದಿಲ್ಲ ಎಂದರು.
ಡಾ.ವಿ.ಎಲ್. ನಂದೀಶ್ ಮಾತನಾಡಿ, ‘ನುರಿತ ಶಸ್ತ್ರಚಿಕಿತ್ಸಕರಿಂದ ಲೇಸರ್ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಬಡವರಿಗೆ ನೆರವಾಗಲಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಶಸ್ತ್ರಚಿಕಿತ್ಸಕ ವೈದ್ಯರಿಗೆ ಅನುಕೂಲವಾಗಲಿದೆ. ಅತ್ಯಾಧುನಿಕವಾದ ಯಂತ್ರಗಳನ್ನು ಬಳಸಿಕೊಂಡು ಸಾಮಾನ್ಯ ಜನರಿಗೂ ಚಿಕಿತ್ಸೆ ಸಿಗುತ್ತಿರುವುದರ ಬಗ್ಗೆ ಈ ಕಾರ್ಯಾಗಾರ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ರಾಜ್ಯದ ನಾನಾ ಭಾಗಗಳಿಂದ ಈ ಕಾರ್ಯಾಗಾರದಲ್ಲಿ ಶಸ್ತ್ರಚಿಕಿತ್ಸಾ ವೈದ್ಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಡಾ.ಬಾಲಕೃಷ್ಣ, ಡಾ.ಬಿ.ಕೆ.ಸುರೇಶ್, ಡಾ.ಸುಜಯ್, ಡಾ.ರೇಖಾ, ಡಾ.ಲಿಂಗರಾಜು, ಡಾ.ಕಿರಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.