ಮಳವಳ್ಳಿ: ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ, ಶಿಸ್ತು, ಸಂಯಮ, ಮಾತೃಭಾವನೆ ಕಲಿಸುವ ದೇವಸ್ಥಾನಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಇರಬೇಕು. ಪೂರ್ವಿಕರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದಲ್ಲಿ ಗುರುವಾರ ಈಶ್ವರ ದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳು ಇದ್ದರೆ ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮಾತೋಲನ ಕೂಡಿರುತ್ತದೆ. ನಮ್ಮ ಹಿರಿಯರ ಸಂಪ್ರದಾಯವನ್ನು ಪಾಲಿಸಬೇಕು. ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆಯ ಜೊತೆಗೆ ಜೀವನದಲ್ಲಿ ಯಶಸ್ಸು ಸಿಕ್ಕಿ ಮೋಕ್ಷ ಸಿಗಲಿದೆ. ಊರಿಗೆ ಉಪಕಾರಿಯಾಗಿ ಜೀವನದಲ್ಲಿ ಸಾರ್ಥಕತೆ ಕಾಣಬೇಕು’ ಎಂದು ಹೇಳಿದರು.
‘ಧರ್ಮದ ಹೆಸರಿನಲ್ಲಿ ದಾಳಿಗಳು ಹಿಂದಿನಿಂದಲೂ ನಡೆದು ಬರುತ್ತಿದ್ದು, ಇಂದಿಗೂ ನಡೆಯುತ್ತಿದೆ. ಭಾರತೀಯರಾದ ನಾವು ದೇವರು, ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡು ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕು’ ಎಂದರು.
ನಿಶ್ಚಲಾನಂದ ನಾಥ ಸ್ವಾಮೀಜಿ ಅವರನ್ನು ಎತ್ತಿನಗಾಡಿಯ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಯಿತು. ನಂತರ ದೇವಸ್ಥಾನವನ್ನು ಉದ್ಘಾಟಿಸಿದ ಅವರು ಶಿವಲಿಂಗಕ್ಕೆ ಅಭಿಷೇಕ ನರೆವೇರಿಸಿ ಅರಳಿ ಗಿಡ ನೆಟ್ಟರು.
ದೇವಸ್ಥಾನ ಉದ್ಘಾಟನೆ ಅಂಗವಾಗಿ ಬುಧವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ದೇವಾಲಯ ಶುದ್ಧಿ, ಪಂಚಗವ್ಯ, ಕಳಸ್ಥಾಪನೆ, ನವಗ್ರಹ ಆರಾಧನೆ, ವಾಸ್ತು ಗಣಪತಿ ಹೋಮ ಸೇರಿದಂತೆ ತೀರ್ಥಪ್ರಸಾದ ವಿನಿಯೋಗ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಗಮಿಕ ಚೌಡಯ್ಯ ದೀಕ್ಷಿತ್ ಹಾಗೂ ಆರ್ಚಕ ಬಸವರಾಜು ನೆರವೇರಿಸಿದರು.
ಗುರುವಾರ ಬೆಳಿಗ್ಗೆ ಮತ್ತಿತಾಳೇಶ್ವರಸ್ವಾಮಿ ಬಸಪ್ಪ ಹಾಗೂ ಮಂಟೇಸ್ವಾಮಿ ಬಸಪ್ಪಗಳನ್ನು ಮೆರವಣಿಗೆ ಮೂಲಕ ಕರೆತಂದು ಹಲವು ಪೂಜಾ ಕೈಂಕರ್ಯಗಳನ್ನು ಮಾಡಲಾಯಿತು.
ದೇವಸ್ಥಾನಕ್ಕೆ ಧನ ಸಹಾಯ ಮಾಡಿದ ದಾನಿಗಳನ್ನು ಹಾಗೂ ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಮುಖಂಡರಾದ ಸಂಜಯ್ ಗೌಡ, ಮದ್ದೂರು ಶಿವಲಿಂಗೇಗೌಡ, ರಾಮಕೃಷ್ಣ, ನಾಗೇಂದ್ರ, ಪ್ರೋ.ಬಿ.ಎಸ್.ಬೋರೇಗೌಡ, ನಾಗರಾಜು, ಹೆಗ್ಗಡೆ ನಾಗರಾಜು, ಚಿಕ್ಕಲಿಂಗಯ್ಯ, ಮೊಗಣ್ಣ, ಅಂದಾನಿಗೌಡ, ಜಯರಾಮು, ದೊಡ್ಡವನು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.