ಕೆ.ಆರ್.ಪೇಟೆ: ‘ತಾಲ್ಲೂಕಿನ ಅಂಬಿಗರಹಳ್ಳಿ, ಪುರ ಮತ್ತು ಸಂಗಾಪುರ ಬಳಿ ಇರುವ ತ್ರಿವೇಣಿ ಸಂಗಮವನ್ನು ಪುಣ್ಯಕ್ಷೇತ್ರವನ್ನಾಗಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಆಗ್ರಹಿಸಿದರು.
ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಮಾಘಮಾಸದ ಪುಣ್ಯ ಸ್ನಾನ ಮಾಡಿ ಕ್ಷೇತ್ರದ ಆರಾಧ್ಯ ದೈವ ಸಂಗಮೇಶ್ವರ ಮತ್ತು ಮಲೆ ಮಹದೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
‘ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಬೇಕೆಂಬ ಆಸೆಯಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಕಾವೇರಿ, ಲಕ್ಷ್ಮಣತೀರ್ಥ ಮತ್ತು ಹೇಮಾವತಿ ನದಿ ಒಂದಾಗುವ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡುವ ಮೂಲಕ ಆ ಆಸೆಯನ್ನು ಪೂರೈಸಿಕೊಂಡಿದ್ದೇನೆ’ ಎಂದರು.
‘ದಕ್ಷಿಣ ಭಾರತದ ಮಹಾಕುಂಭ ಮೇಳ ನಡೆದಿರುವ ಈ ಸ್ಥಳ ಸೌಕರ್ಯಗಳಿಲ್ಲದೆ ಹಾಳಾಗುತ್ತಿದೆ. ಮೋಜು ಮಸ್ತಿಯ ತಾಣವಾಗುತ್ತಿದೆ. ಕುಂಭಮೇಳ ನಡೆದ ನಂತರ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಗಮನಹರಿಸಿ ತ್ರಿವೇಣಿ ಸಂಗಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಭಕ್ತರಿಗೆ ಅನುಕೂಲವಾಗುವಂತೆ ಉತ್ತಮ ರಸ್ತೆ, ಬಸ್ ಸಂಪರ್ಕ, ಶುದ್ಧ ಕುಡಿಯುವ ನೀರು ವ್ಯವಸ್ಥೆ, ಸ್ನಾನಗೃಹ, ಬಟ್ಟೆ ಬದಲಿಸುವ ಕೊಠಡಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಮೊದಲ ಬಾರಿಗೆ ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಶ್ರೀಗಳನ್ನು ಭಕ್ತರು ಮತ್ತು ಗ್ರಾಮಸ್ಥರು ಬರಮಾಡಿಕೊಂಡರು. ತ್ರಿವೇಣಿ ಸಂಗಮ ಅಭಿವೃದ್ಧಿ ಟ್ರಸ್ಟ್ ಸಂಚಾಲಕ ಅಂ.ಚಿ.ಸಣ್ಣಸ್ವಾಮಿ ಗೌಡ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್, ಕನ್ನಡ ಭಾಷಾ ತಜ್ಞ ಸೋಮಶೇಖರ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.