
ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಲೋಕಾಯುಕ್ತ ಅಧಿಕಾರಿಗಳಿಗೆ ಅಧಿಕ ದೂರಗಳು ಬಂದವು.
‘ಜಮೀನು ಪೋಡಿಗೆ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಮೂರು ತಿಂಗಳಾದರೂ ಕೆಲಸ ಆಗಿಲ್ಲ’ ಎಂದು ರೈತ ಕರಿಯಪ್ಪ ದೂರು ನೀಡಿದರು. ‘ಪಾಲಹಳ್ಳಿ ಸರ್ಕಾರಿ ಶಾಲೆಯ ಜಾಗ ಅತಿಕ್ರಮವಾಗಿದ್ದು, ಅದನ್ನು ತೆರವು ಮಾಡಿಸಬೇಕು’ ಎಂದು ಪಿ.ಎಸ್. ನಟರಾಜ್ ಅರ್ಜಿ ಸಲ್ಲಿಸಿದರು. ‘ಇದೇ ಗ್ರಾಮದಲ್ಲಿ ನಡೆದಿರುವ ಜಲಜೀವನ್ ಮಿಷನ್ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ತನಿಖೆ ನಡೆಸಬೇಕು’ ಎಂದು ಸಿ. ದೇವರಾಜು ಮನವಿ ಮಾಡಿದರು. ‘ಪಾಲಹಳ್ಳಿ ಮಾರ್ಗವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ವಸ್ತುಗಳನ್ನು ವಶಪಡಿಸಿಕೊಂಡು ತಿಂಗಳಾದರೂ ಆರೋಪಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಜನ ಸಂಗ್ರಾಮ ಪರಿಷತ್‌ನ ಪ್ರಸನ್ನ ದೂರಿದರು.
‘ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಮಧ್ಯೆ ಜಲ್ಲಿ, ಎಂ–ಸ್ಯಾಂಡ್, ಸೈಜುಗಲ್ಲು ಸಾಗಿಸುವ ಅಧಿಕ ಭಾರದ ಲಾರಿಗಳು ಓಡಾಡುತ್ತಿವೆ. ರಸ್ತೆ ಹಾಳಾಗಿದ್ದು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಬೇಕು’ ಎಂದು ಗ್ರಾಮದ ಮಹೇಶ್ ಮನವಿ ಮಾಡಿದರು. ‘ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಸರ್ಕಾರಿ ಜಾಗ ಇದ್ದು ಬಡ ಜನರಿಗೆ ನಿವೇಶನ ಹಂಚುವಂತೆ ಸಂಬಂಧಿಸಿದವರಿಗೆ ಸೂಚಿಸಬೇಕು’ ಎಂದು ಗ್ರಾ.ಪಂ. ಸದಸ್ಯ ಮುರಳಿ ಕೋರಿದರು.
‘ತಾಲ್ಲೂಕಿನ ಮುಂಡುಗದೊರೆ, ಕಾಳೇನಹಳ್ಳಿ, ಚನ್ನನಕೆರೆ ಬಳಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಅದನ್ನು ತಡೆಯಬೇಕು’ ಎಂದು ಸ್ಥಳೀಯರು ಮನವಿ ಸಲ್ಲಿಸಿದರು. ‘ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕಾಲಕ್ಕೆ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಪ್ರಕಾಶ್ ಹೇಳಿದರು.ದೂರು ಅರ್ಜಿಗಳಿಗೆ ನಿಗದಿತ ಅವಧಿಯಲ್ಲಿ ಕ್ರಮ ವಹಿಸಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಸೂಚಿಸಿದರು.
ತಹಶೀಲ್ದಾರ್ ಚೇತನಾ ಯಾದವ್, ತಾ.ಪಂ. ಇಒ ಎ.ಬಿ. ವೇಣು, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಲೋಕಾಯುಕ್ತ ಇನ್‌ಸ್ಪೆಕ್ಟರ್ ಎಂ. ರವಿಕುಮಾರ್, ಟೌನ್ ಪೊಲೀಸ್ ಠಾಣೆ ಸಿಪಿಐ ಬಿ.ಜಿ. ಕುಮಾರ್, ಕೆಆರ್‌ಎಸ್ ಠಾಣೆ ಸಿಪಿಐ ವಿವೇಕಾನಂದ, ಲೋಕಾಯುಕ್ತ ಸಿಬ್ಬಂದಿಗಳಾದ ಅನಿಲ್, ಮಾನಸ, ಶ್ರೀದೇವಿ, ನಂದಿನಿ, ನಂದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.