ADVERTISEMENT

ಜೆಡಿಎಸ್‌ ತೊರೆಯುತ್ತಿರುವ ನಿಷ್ಠಾವಂತರು: ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 14:14 IST
Last Updated 4 ಮಾರ್ಚ್ 2023, 14:14 IST
ತಗ್ಗಹಳ್ಳಿ ವೆಂಕಟೇಶ್‌
ತಗ್ಗಹಳ್ಳಿ ವೆಂಕಟೇಶ್‌   

ಮಂಡ್ಯ: ‘ಜಿಲ್ಲೆಯ ಜೆಡಿಎಸ್‌ ಪಕ್ಷದಲ್ಲಿ ಉತ್ತಮ ವಾತಾವರಣವಿಲ್ಲ, ಜೆಡಿಎಸ್ ವರಿಷ್ಠರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಸಮನ್ವಯತೆಯ ಕೊರತೆಯಿಂದಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ’ ಎಂದು ಮುಖಂಡ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

‘ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಜೆಡಿಎಸ್‌ ಪಕ್ಷ ತೊರೆಯುತ್ತಿದ್ದಾರೆ, ಇದು ಪಕ್ಷಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ನಾನೂ ಕಳೆದ 40 ವರ್ಷಗಳ ಕಾಲ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದೆ. ಪಕ್ಷದ ಮುಖಂಡರ ನಿರ್ಲಕ್ಷ್ಯದಿಂದಾಗಿ ಬೇಸತ್ತು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದೂವರೆ ವರ್ಷ ಕಳೆದರೂ ಪಕ್ಷದ ವರಿಷ್ಠರಾಗಲೀ, ಜಿಲ್ಲಾ ಘಟಕದ ಅಧ್ಯಕ್ಷರಾಗಲೀ, ಶಾಸಕರಾಗಲೀ ಕರೆದು ಮಾತನಾಡಿಸಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ದೂರಿದರು.

‘ಮುಖಂಡರನ್ನು ಜೆಡಿಎಸ್‌ ನಾಯಕರು ಸರಿಯಾಗಿ ನಡೆಸಿಕೊಳ್ಳದ ಕಾರಣ ನಮ್ಮ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಒಂದು ಕಡೆ ನಾಗರ ಹಾವು, ಮತ್ತೊಂದು ಕಡೆ ಹೆಬ್ಬಾವು ಇದೆ. ಪಕ್ಷದಲ್ಲಿ ಇರುವವರು ಎರಡೂ ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ನಾನು ಕೂಡ ಕೊನೇ ಗಳಿಗೆಯವರೆಗೂ ಟಿಕೆಟ್‌ಗಾಗಿ ಹೋರಾಟ ನಡೆಸುತ್ತೇನೆ. ಒಂದು ವೇಳೆ ಸಿಗದಿದ್ದಲ್ಲಿ ಬಂಡಾಯವಾಗಿ ಸ್ಪರ್ಧಿಸುವುದು ಖಚಿತ’ ಎಂದು ಹೇಳೀದರು.

ADVERTISEMENT

‘ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಅವರು ಪಕ್ಷವನ್ನು ತನ್ನ ಸ್ವಂತ ಆಸ್ತಿ ಎಂದು ತಿಳಿದಿದ್ದಾರೆ. ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಹಲವಾರು ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ. ಅವರ ಧೋರಣೆಯಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲಿದೆ. ವರಿಷ್ಠರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ಮುಖಂಡರಾದ ಪುಟ್ಟೇಗೌಡ, ಸಿದ್ದೇಗೌಡ, ಮುರಳಿ, ಲಿಂಗಯ್ಯ, ಸಿದ್ದೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.