ಮಳವಳ್ಳಿ: ‘ರಾಜ್ಯದ ರೈತರ ಉಳಿವಿಗೆ ಹಾಗೂ ಅಭಿವೃದ್ಧಿಗೆ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವು ಅನಿವಾರ್ಯ’ ಎಂದು ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಬಳಗ ಗೌರವಾಧ್ಯಕ್ಷ ಎಚ್.ವಿ.ನಾಗರಾಜು ಹೇಳಿದರು.
ತಾಲ್ಲೂಕಿನ ಕಿರುಗಾವಲು ಹೋಬಳಿಯ ಹಂಚೀಪುರ ಹೊರವಲಯದ ದುಗ್ಗನಹಳ್ಳಿ ಹಾಗೂ ತಳಗವಾದಿ ವ್ಯಾಪ್ತಿಯ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಪದಾಧಿಕಾರಿಗಳ ಸಭೆಯಲ್ಲಿ ಚುನಾವಣಾ ಪ್ರಚಾರದ ಬಗ್ಗೆ ಚರ್ಚಿಸಿ ಅವರು ಮಾತನಾಡಿದರು.
‘ಕಾವೇರಿ ಸೇರಿದಂತೆ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯದ ಪರವಾಗಿ ಗಟ್ಟಿಧ್ವನಿ ಎತ್ತುವ ನಾಯಕರಾಗಿ ಎಚ್.ಡಿ.ಕುಮಾರಸ್ವಾಮಿ ಹೊರಹೊಮ್ಮಲಿದ್ದಾರೆ. ಜಿಲ್ಲೆಯ ಜನರ ಒತ್ತಾಯದಂತೆ ಅವರು ಸ್ಪರ್ಧಿಸಿದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ಇದೆ’ ಎಂದು ಹೇಳಿದರು.
ಹಿರಿಯ ಮುಖಂಡ ಎಚ್.ವಿ.ಮುದ್ದೇಗೌಡ ಮಾತನಾಡಿ, ‘ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದರು. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ವೇಳೆ ಸಂಕಷ್ಟದಲ್ಲಿದ್ದ ರೈತ ಸಮುದಾಯದ ರಕ್ಷಣೆಗೆ ಧಾವಿಸಿ ರೈತರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿದ್ದರು. ಸಾರಾಯಿ, ಲಾಟರಿ ನಿಷೇಧಂಥ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ತಳಗವಾದಿ ಚಿಕ್ಕಣ್ಣ ಮಾತನಾಡಿ, ‘ನಾಡಿನ ಅಭಿವೃದ್ಧಿಗಾಗಿ ಶ್ರಮಿಸುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದರು.
ಮುಖಂಡರಾದ ಮಂಚಯ್ಯ, ಸುರೇಶ್, ರಮೇಶ್, ರಾಮಣ್ಣ, ನಿಂಗೇಗೌಡ, ವೆಂಕಟೇಶ್, ಎಂ.ಜಿ.ರಮೇಶ್, ಪ್ರಭುಸ್ವಾಮಿ, ಮುದ್ದೇಗೌಡ, ದೊಡ್ಡಮರಿಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.