ADVERTISEMENT

8 ಲಕ್ಷ ಪುಸ್ತಕಗಳಿಗೆ ನೆಲೆ ಕಲ್ಪಿಸಿ: ಎಂ.ಅಂಕೇಗೌಡರ ಮನವಿ

ಅಭಿನಂದನಾ ಸಮಾರಂಭ: ಪುಸ್ತಕ ಮನೆಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:04 IST
Last Updated 25 ಫೆಬ್ರುವರಿ 2026, 6:04 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ಮಂಗಳವಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಅವರನ್ನು ಅಭಿನಂದಿಸಲಾಯಿತು. ತೈಲೂರು ವೆಂಕಟಕೃಷ್ಣ, ಮೀರಾ ಶಿವಲಿಂಗಯ್ಯ, ಹರ್ಷ ವಿ.ಪಣ್ಣೆದೊಡ್ಡಿ, ಜಿ.ಟಿ.ವೀರಪ್ಪ, ಎಂ.ವಿ. ಧರಣೇಂದ್ರಯ್ಯ, ಪ್ರೊ.ಜಯಪ್ರಕಾಶಗೌಡ ಪಾಲ್ಗೊಂಡಿದ್ದರು 
ಮಂಡ್ಯ ನಗರದ ಗಾಂಧಿ ಭವನದಲ್ಲಿ ಮಂಗಳವಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಅವರನ್ನು ಅಭಿನಂದಿಸಲಾಯಿತು. ತೈಲೂರು ವೆಂಕಟಕೃಷ್ಣ, ಮೀರಾ ಶಿವಲಿಂಗಯ್ಯ, ಹರ್ಷ ವಿ.ಪಣ್ಣೆದೊಡ್ಡಿ, ಜಿ.ಟಿ.ವೀರಪ್ಪ, ಎಂ.ವಿ. ಧರಣೇಂದ್ರಯ್ಯ, ಪ್ರೊ.ಜಯಪ್ರಕಾಶಗೌಡ ಪಾಲ್ಗೊಂಡಿದ್ದರು    

ಮಂಡ್ಯ: ‘ಯಾವ ಪ್ರಶಸ್ತಿ ಕೊಟ್ಟರೂ ನನಗೆ ಸಮಾಧಾನವಿಲ್ಲ. ನನ್ನ ಗ್ರಂಥಾಲಯದಲ್ಲಿ ಎಂಟು ಲಕ್ಷ ಪುಸ್ತಕಗಳು ನೆಲದ ಮೇಲೆ ಇವೆ. ಅವುಗಳು ಯಾವಾಗ ಕಪಾಟಿಗೆ ಹೋಗುತ್ತದೋ ಅಂದು ನನಗೆ ಸಮಾಧಾನವಾಗುತ್ತದೆ’ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ. ಅಂಕೇಗೌಡ ಹೇಳಿದರು. 

ನಗರದ ಗಾಂಧಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಂಗಳವಾರ ನಡೆದ ಪುಸ್ತಕ ಪ್ರೇಮಿ ಅಂಕೇಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಕಿಡಿಗೇಡಿಗಳ ಕೃತ್ಯದಿಂದ ತಕ್ಷಶಿಲೆ, ನಳಂದ ವಿವಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಅಮೆರಿಕಾದ ವ್ಯಕ್ತಿಯೊಬ್ಬರು ಗ್ರಂಥಾಲಯ ನೋಡಿ ಹೊಗಳುತ್ತಾರೆ. ಆದರೆ ಇಲ್ಲಿರುವ ಕೆಲವರಿಗೆ ಇದರ ಮೌಲ್ಯ ತಿಳಿಯುತ್ತಿಲ್ಲ. ಪುಸ್ತಕಗಳ ಪ್ರೀತಿ ಎಲ್ಲರಿಗೂ ಬರಲಿ. ಚೀನಾದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಒಬ್ಬ ವಿದ್ಯಾರ್ಥಿ 20 ಲಕ್ಷ ಪುಸ್ತಕ ಸಂಗ್ರಹ ಇರುವುದನ್ನು ಹೇಳುತ್ತಾರೆ. ಆದರೆ ಪಕ್ಕದಲ್ಲಿರುವವರನ್ನು ಗಮನಿಸುತ್ತಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘ಸಹಜವಾಗಿ ಗ್ರಾಮೀಣ ಭಾಗದಿಂದ ಬಂದಂತಹ ವ್ಯಕ್ತಿ ನಾನು. ಆ ಕಾಲದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಅಥವಾ ಓದಲು ಬೇಕಾದ ಎಲ್ಲ ಪುಸ್ತಕಗಳು ಸಿಗುತ್ತಿರಲಿಲ್ಲ. ಇದನ್ನು ಮನಗಂಡ ನಾನು, ಪ್ರಸ್ತುತದಲ್ಲಿ ಹಾಗೂ ಮುಂದಿನ ಪೀಳಿಗೆಗೆ ಎಲ್ಲ ಪುಸ್ತಕಗಳು ಸಿಗಬೇಕೆನ್ನುವ ಹಂಬಲವಿಟ್ಟುಕೊಂಡು ಗ್ರಂಥಾಲಯ ನಿರ್ಮಿಸಿರುವೆ. ಈ ಪದ್ಮಶ್ರೀ ಪುರಸ್ಕಾರ ಸಿಕ್ಕಿರುವುದು ನಿಮ್ಮೆಲ್ಲರ ಪರಿಶ್ರಮವೇ ಕಾರಣವಾಗಿದ್ದು, ನಾನು ಕೇವಲ ನಿಮಿತ್ತ’ ಎಂದರು.

ಪುಸ್ತಕಗಳೇ ಅನನ್ಯ ಸಂಪತ್ತು: ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಲಕ್ಷ ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿ ಮಹಾಗ್ರಂಥಾಲಯ ಸ್ಥಾಪಿಸಿರುವುದನ್ನು ಗುರುತಿಸಿ ಪದ್ಮಶ್ರೀ ಪಡೆದಿರುವ ಅಂಕೇಗೌಡ ಅವರು ಪುಸ್ತಕಗಳೇ ಅನನ್ಯ ಸಂಪತ್ತು ಎಂಬುದನ್ನು ಸಾಬೀತುಪಡಿಸಿ ಮಾದರಿ ಆಗಿದ್ದಾರೆ’ ಎಂದು ಶ್ಲಾಘಿಸಿದರು.

ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹರ್ಷ ವಿ.ಪಣ್ಣೆದೊಡ್ಡಿ, ಮಾಜಿ ಅಧ್ಯಕ್ಷರಾದ ಎಂ.ವಿ. ಧರಣೇಂದ್ರಯ್ಯ, ಜಿ.ಟಿ. ವೀರಪ್ಪ, ಡಿ.ಪಿ. ಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.