ADVERTISEMENT

ವಚನಗಳ ಜ್ಞಾನ ಭಂಡಾರ ಮಾದಾರ ಚನ್ನಯ್ಯ

ಸಮಗ್ರ ಸಂಪುಟ ‘ಖಂಡಾಯಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಶ್ರೀಪಾದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:27 IST
Last Updated 7 ಜನವರಿ 2026, 5:27 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ಸಾಹಿತಿ ಮ.ಸಿ.ನಾರಾಯಣ ಮಳವಳ್ಳಿ ಅವರ ವಿರಚಿತ ಪುಸ್ತಕಗಳ ವಿಮರ್ಶನಾ ಸಮಗ್ರ ಸಂಪುಟದ ‘ಖಂಡಾಯಗಳು’ ಕೃತಿ ಬಿಡುಗಡೆ ಮಾಡಲಾಯಿತು
ಮಂಡ್ಯ ನಗರದ ಗಾಂಧಿ ಭವನದಲ್ಲಿ ಸಾಹಿತಿ ಮ.ಸಿ.ನಾರಾಯಣ ಮಳವಳ್ಳಿ ಅವರ ವಿರಚಿತ ಪುಸ್ತಕಗಳ ವಿಮರ್ಶನಾ ಸಮಗ್ರ ಸಂಪುಟದ ‘ಖಂಡಾಯಗಳು’ ಕೃತಿ ಬಿಡುಗಡೆ ಮಾಡಲಾಯಿತು   

ಮಂಡ್ಯ: ‘ವಚನಗಳ ಪಿತಾಮಹ ಎನಿಸಿಕೊಂಡ ಮಾದಾರ ಚನ್ನಯ್ಯ ಅವರು ಅಂದಿನ ಕಾಲಘಟ್ಟದಲ್ಲಿಯೇ ಒಂದು ಜ್ಞಾನ ಭಂಡಾರವಾಗಿ ಹೊರಹೊಮ್ಮಿದ್ದರು’ ಎಂದು ಪತ್ರಕರ್ತ ಶ್ರೀಪಾದು ಶ್ಲಾಘಿಸಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಆದಿಜಾಂಬವ ಸಂಘದ ವತಿಯಿಂದ ಭಾನುವಾರ ನಡೆದ ಮಾದಾರ ಚೆನ್ನಯ್ಯ ಅವರ 956ನೇ ಜಯಂತ್ಯುತ್ಸವ, ಸಾಹಿತಿ ಮ.ಸಿ.ನಾರಾಯಣ ಮಳವಳ್ಳಿ ಅವರ ವಿರಚಿತ ಪುಸ್ತಕಗಳ ಸಮಗ್ರ ಸಂಪುಟ ‘ಖಂಡಾಯಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರಿಕಾಲ ಚೋಳ ಒಬ್ಬ ಮಹಾನ್ ಪ್ರಾಚೀನ ಚೋಳ ರಾಜನಾಗಿದ್ದನು. ಅವರ ಆಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಅಪ್ಪಟ ಶಿವಭಕ್ತನೇ ಮಾದಾರ ಚನ್ನಯ್ಯ. ಶಿವನನ್ನೇ ಒಲಿಸಿಕೊಂಡ ಮಾದಾರ ಚೆನ್ನಯ್ಯ ಅವರಿಗೆ ಶಿಷ್ಯನಾದ ಕರಿಕಾಲ ಚೋಳನ ಕಥೆಯೇ ವಿಭಿನ್ನತೆಯಿಂದ ಇದೆ ಏಕೆಂದರೆ, ಶಿವ ಸಾಕ್ಷಾತ್ಕಾರ ಕಂಡ ಮಾದಾರ ಚನ್ನಯ್ಯ ಶಿವಶರಣರಾದರು ಎಂದರೆ ಅತಿಶಯೋಕ್ತಿಯಲ್ಲ ಎಂದು ತಿಳಿಸಿದರು.

ADVERTISEMENT

12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಶಿವಶರಣ ಮಾದಾರ ಚನ್ನಯ್ಯ ಅವರನ್ನು ಚೆನ್ನಬಸವಣ್ಣ ಮೊದಲಾದ ವಚನಕಾರರು ಸ್ಮರಿಸಿರುವುದು ಕಂಡುಬರುತ್ತದೆ. ಬಸವಣ್ಣ ಇವರನ್ನು ತಮ್ಮ ವಚನಗಳಲ್ಲಿ ಅತಿ ಪೂಜ್ಯಭಾವದಿಂದ ಕೊಂಡಾಡಿದ್ದಾರೆ ಎಂದರು.

ಮೈಸೂರು ವಿವಿ ಸಹ ಪ್ರಾಧ್ಯಾಪಕಿ ಕೆ.ಸುಮಿತ್ರಾ ಮಾತನಾಡಿ, ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಮಾಧ್ಯಮಗಳಲ್ಲಿ ಪ್ರತಿನಿತ್ಯ ಅಪರಾಧ ಪ್ರಕರಣಗಳಿಗೆ ಬಹುತೇಕರು ಒತ್ತು ನೀಡಿರುವುದು ದುರಂತ. ಸಾಹಿತಿ ಮ.ಸಿ.ನಾರಾಯಣ ಮಳವಳ್ಳಿ ಅವರು ಹಣದ ಹಿಂದೆ ಹೋದವರಲ್ಲ, ಸಮಾಜದಲ್ಲಿ ಪ್ರಮುಖ ಪಾತ್ರ ಹೇಗಿರುತ್ತದೆ ಎಂಬುದನ್ನು ಇವರು ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿರುವುದೇ ಉತ್ತಮವಾದ ಕೆಲಸವಾಗಿದೆ ಎಂದು ತಿಳಿಸಿದರು.

ಸಾಹಿತಿ ಮ.ಸಿ.ನಾರಾಯಣ ಮಳವಳ್ಳಿ ಅವರ ವಿರಚಿತ ಪುಸ್ತಗಳ ವಿಮರ್ಶನಾ ಲೇಖನಗಳ ಸಮಗ್ರ ಸಂಪುಟ ‘ಖಂಡಾಯಗಳು’ ಕೃತಿ ಲೋಕಾರ್ಪಣೆ ಮಾಡಲಾಯಿತು.

ನಿವೃತ್ತ ನ್ಯಾಯಾಧೀಶ ಎಚ್‌.ಸಿ.ಶ್ಯಾಮಪ್ರಸಾದ್‌, ಸಾಹಿತಿ ಜಿ.ಟಿ.ವೀರಪ್ಪ, ನಿವೃತ್ತ ಜಂಟಿ ಕೃಷಿ ನಿರ್ದೇಶಕ ಜಿ.ಎಚ್‌.ಶ್ರೀರಂಗ, ಮುಖಂಡರಾದ ಎಚ್‌.ಜಿ.ರೇವಣ್ಣ, ಎಸ್‌.ಶಂಕರ್‌, ಸಿ.ಅನ್ನದಾನಿ, ಕೆ.ಚಿಕ್ಕತಿಮ್ಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.