ಮದ್ದೂರು (ಮಂಡ್ಯ ಜಿಲ್ಲೆ): ಪಟ್ಟಣದಲ್ಲಿ ಬುಧವಾರ ಬಿಜೆಪಿ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ’ಯು ಪೊಲೀಸ್ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯಿತು. ಹಿಂದುತ್ವ ಪರವಾದ ಸಾವಿರಾರು ಕಾರ್ಯಕರ್ತರ ಶಕ್ತಿ ಪ್ರದರ್ಶನ ಕ್ಕೂ ಸಾಕ್ಷಿಯಾಯಿತು.
ಬಿಜೆಪಿ ಕಚೇರಿ ಮುಂಭಾಗ ಬೆಳಿಗ್ಗೆ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗಣೇಶಮೂರ್ತಿಗೆ ಆರತಿ ಬೆಳಗಿ ಮೆರವಣಿಗೆಗೆ ಚಾಲನೆ ನೀಡಿದರು. ಜಾನಪದ ಕಲಾ ತಂಡಗಳು ಮೆರುಗು ನೀಡಿದವು.
ಕೇಸರಿ ಶಾಲುಗಳನ್ನು ಧರಿಸಿ, ಹನುಮಧ್ವಜ ಮತ್ತು ಕೇಸರಿ ಬಾವುಟಗಳನ್ನು ಹಾರಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಡಿಜೆ ಸಂಗೀತಕ್ಕೆ ಕುಣಿಯುತ್ತಾ, ‘ಜೈ ಶ್ರೀರಾಮ್, ಜೈ ಗಣೇಶ’ ಘೋಷಣೆಗಳನ್ನು ಕೂಗಿದರು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷೋದ್ಗಾರ ಮಾಡಿದರು. ವರ್ತಕರು ಅಂಗಡಿಗಳನ್ನು ಮುಚ್ಚಿ, ಸಂಭ್ರಮದಲ್ಲಿ ಮಿಂದೆದ್ದರು.
ಸಂಜೆ ಶಿಂಷಾ ನದಿಯಲ್ಲಿ ಸಾಮೂಹಿಕವಾಗಿ 14ಕ್ಕೂ ಹೆಚ್ಚಿನ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಸುತ್ತಮುತ್ತಲ ಜಿಲ್ಲೆಗಳ ಕೆಎಸ್‌ಆರ್‌ಪಿ, ಡಿಎಆರ್, ಆರ್‌ಎಎಫ್, ಅರೆ ಸೇನಾ ತುಕಡಿಗಳು ಸೇರಿ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.
‘ಭವಿಷ್ಯ ಹಾಳು ಮಾಡುತ್ತಿರುವ ಕಾಂಗ್ರೆಸ್’
‘ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ‘ಕೇಸರಿ’ ಕಂಡರೆ ಆಗಲ್ಲ, ಕಿತ್ತು ಬಿಸಾಕುತ್ತಾರೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವೇ ರಾಜ್ಯದಲ್ಲಿ ಬೆಂಕಿ ಹಚ್ಚಲು ಕುಮ್ಮಕ್ಕು ನೀಡುತ್ತಿದೆ. ಅಯೋಗ್ಯ ಕಾಂಗ್ರೆಸ್ ನಾಯಕರ ಮಾತು ಕೇಳಿಕೊಂಡು ಮುಸ್ಲಿಂ ಯುವಕರು ಕಲ್ಲೆಸೆದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಧರ್ಮಗುರುಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಪಾದಿಸಿದರು.
‘ಮಸೀದಿಯಲ್ಲಿ ಕಲ್ಲು ಸಂಗ್ರಹಿಸಿದಾಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು. ಶಾಂತಿ ಕದಡಿದ ದೇಶದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಭದ್ರಾವತಿ ಶಾಸಕರ ಹೇಳಿಕೆ ಬೆಂಕಿಗೆ ತುಪ್ಪ ಸುರಿಯುವಂತಿದೆ. ಮದ್ದೂರು ಘಟನೆಯ ಹೊಣೆಯನ್ನು ಕಾಂಗ್ರೆಸ್ ಸರ್ಕಾರವೇ ಹೊರಬೇಕು. ಹಿಂದೂಗಳ ಮತ ಪಡೆಯದೆ ಅಧಿಕಾರಕ್ಕೆ ಬಂದಂತೆ ಸಿ.ಎಂ ವರ್ತಿ ಸುತ್ತಿದ್ದಾರೆ’ ಎಂದು ಟೀಕಿಸಿದರು.
ಬಿಜೆಪಿಯಿಂದ ಪರಿಹಾರ
ಮದ್ದೂರಿನ ಘಟನೆಯಲ್ಲಿ ಗಾಯಗೊಂಡ ಅಜಯ್ ಸೇರಿ ಗಾಯಾಳುಗಳ ಮನೆಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿ, ಪರಿಹಾರ ವಿತರಿಸಿ, ಸಾಂತ್ವನ ಹೇಳಿದರು. ನಂತರ ಜಿಲ್ಲಾಧಿಕಾರಿ ಕುಮಾರ ಮತ್ತು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಂದ ಬಿಜೆಪಿ, ಜೆಡಿಎಸ್ ಸತ್ಯಶೋಧನಾ ಸಮಿತಿಯು ಮಾಹಿತಿ ಸಂಗ್ರಹಿಸಿತು.
ಸಿದ್ದರಾಮಯ್ಯ ಮುಲ್ಲಾಗಳ ಟೋಪಿ ಧರಿಸಿ, ಹಿಂದೂಗಳಿಗೆ ಟೋಪಿ ಹಾಕುತ್ತಾರೆ. ಮದ್ದೂರು ಜನ ನಿಮ್ಮ ತಲೆ ಮೇಲೆ ವಡೆ ತಟ್ತಾರೆ. ಮಂಡ್ಯ ಜನರನ್ನು ಛತ್ರಿಗಳೆಂದಿದ್ದ ಡಿಸಿಎಂ ಕಡೆಯವರೇ ‘ಛತ್ರಿ’ ಕೆಲಸ ಮಾಡಿದ್ದಾರೆ.ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ನೇಪಾಳದಲ್ಲಿ ಯುವಜನ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಯತ್ನಿಸಿದಂತೆ, ನೀವೂ ನಿಮಗೆ ಬೇಕಾದ ಸರ್ಕಾರವನ್ನು ಆಡಳಿತಕ್ಕೆ ತರಬಹುದು.ಸುಮಲತಾ ಅಂಬರೀಶ್, ಮಾಜಿ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.