ADVERTISEMENT

ಮದ್ದೂರು ಗಲಭೆ | ಅಧಿಕಾರಿ ಹಿಡಿಯುವ ಹುನ್ನಾರ: ಪ್ರಗತಿಪರ ಸಂಘಟನೆ ಮುಖಂಡರ ಆರೋಪ

ಜಾಥಾಗೆ ಪೊಲೀಸರ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:56 IST
Last Updated 23 ಸೆಪ್ಟೆಂಬರ್ 2025, 5:56 IST
ಮದ್ದೂರಿನಲ್ಲಿ ಸೋಮವಾರ ‘ಸಾಮರಸ್ಯ ನಡಿಗೆ’ ಅಂಗವಾಗಿ ಟಿಎಪಿಸಿಎಂಎಸ್‌ ಆವರಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಸಭೆ ನಡೆಯಿತು
ಮದ್ದೂರಿನಲ್ಲಿ ಸೋಮವಾರ ‘ಸಾಮರಸ್ಯ ನಡಿಗೆ’ ಅಂಗವಾಗಿ ಟಿಎಪಿಸಿಎಂಎಸ್‌ ಆವರಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಸಭೆ ನಡೆಯಿತು   

ಮದ್ದೂರು: ಪಟ್ಟಣದಲ್ಲಿ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ಸಾಮರಸ್ಯ ನಡಿಗೆ ನಡೆಸಲು ಪೊಲೀಸರು ಶಿವಪುರದ ಸತ್ಯಾಗ್ರಹ ಸೌಧದವರಗೆ ಜಾಥಾಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮಳವಳ್ಳಿ ರಸ್ತೆಯ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಸಭೆ ನಡೆಸಿದರು.

ಮಳವಳ್ಳಿ ರಸ್ತೆಯಲ್ಲಿರುವ ಪ್ರೊ.ನಂಜುಂಡಸ್ವಾಮಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು. ಶಿವಪುರದವರೆಗೆ ಕಾಲ್ನಡಿಗೆ ಜಾಥಾ ನಡೆಸಲು ಪೊಲೀಸ್ ಇಲಾಖೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಮೆಯ ಬಳಿಯ ಟಿಎಪಿಸಿಎಂಎಸ್‌ಗೆ ಸೇರಿದ ಆವರಣದಲ್ಲಿಯೇ ಸೌಹಾರ್ದ ಸಾಮರಸ್ಯದ ನಡಿಗೆಗೆ ಚಾಲನೆ ನೀಡಿದ ಬಳಿಕ ಸಭೆ ನಡೆಸಲಾಯಿತು.

ಸಭೆಯನ್ನು ಮಾಜಿ ಪುರಸಭಾಧ್ಯಕ್ಷ ಎಂ.ಸಿ. ಬಸವರಾಜು ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯು ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಗೆ ಹೆಸರಾಗಿದೆ. ಇಂತಹ ಜಿಲ್ಲೆಯಲ್ಲಿ ಕೆಲವರು ಕೋಮುಗಲಭೆ ಉಂಟು ಮಾಡುವ ಮೂಲಕ ಮುಂದೆ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಮಾತನಾಡಿ, ಈ ಸಾಮರಸ್ಯ ನಡಿಗೆಯು ಶಿವಪುರದವರೆಗೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಬೇಕಿತ್ತು. ಕೋಮು ಪ್ರಚೋದನೆ ಮಾಡುವ ಬಿಜೆಪಿಯ ಸಿ.ಟಿ. ರವಿ, ಬಸವನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಅಂಥವರನ್ನು ಮದ್ದೂರಿಗೆ ಬಂದು ಕೋಮು ದ್ವೇಷದ ಬಗ್ಗೆ ಮಾತನಾಡಲು ಅನುಮತಿ ನೀಡಿ, ಈಗ ನಮ್ಮಂತಹ ಶಾಂತಿಪ್ರಿಯರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅನುಮತಿ ನೀಡದಿರುವುದು ಬೇಸರ ತಂದಿದೆ ಎಂದರು.

ಸಿಪಿಐಎಂನ ಕೃಷ್ಣೇಗೌಡ ಮಾತನಾಡಿ, ಮದ್ದೂರಿನಲ್ಲಿ ಇತ್ತೀಚೆಗೆ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದ ಬಳಿಕ ಆದ ಗಲಭೆಯನ್ನು ಪೊಲೀಸರು ತಹಬದಿಗೆ ತಂದಿದ್ದಾರೆ. ಅದನ್ನು ನಾವು ಸ್ವಾಗತಿಸಿದ್ದೇವೆ. ಆದರೆ ಸಾಮರಸ್ಯ ನಡಿಗೆ ನಡೆಸಲು ಅನುಮತಿ ನೀಡದಿರುವುದು ಸರಿಯಲ್ಲ ಎಂದು ಟೀಕಿಸಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜಶೇಖರ್ ಮೂರ್ತಿ ಮಾತನಾಡಿದರು. 

ವಿವಿಧ ಜನಪರ ಸಂಘಟನೆಗಳ ಪ್ರೊ.ಭೂಮಿಗೌಡ, ನಿವೃತ್ತ ಪ್ರಾಂಶುಪಾಲರಾದ ಕೃಷ್ಣ, ಮುಖಂಡರಾದ ವಿಶ್ವನಾಥ್, ಟಿ.ಯಶವಂತ್, ಕೃಷ್ಣೇಗೌಡ, ಎನ್.ಎಲ್. ಭರತ್ ರಾಜ್, ಆರ್. ಕೃಷ್ಣ, ಲತಾ, ಸುಶೀಲಾ, ಶಿವಲಿಂಗಯ್ಯ, ಮರಳಿಗ ಶಿವರಾಜ್, ದ್ಯಾವಪ್ಪ, ಇಲಿಯಾಜ್, ಭೂಮಿಗೌಡ, ಸೋಮನಹಳ್ಳಿ ಅಂದಾನಿ, ಲಿಂಗಪ್ಪಾಜಿ, ಹನುಮೇಶ್ ಸೇರಿದಂತೆ ಹಲವರು ಹಾಜರಿದ್ದರು.

ಮದ್ದೂರಿನಲ್ಲಿ ಸೋಮವಾರ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ‘ಸಾಮರಸ್ಯ ನಡಿಗೆ’ ಕಾರ್ಯಕ್ರಮ ನಡೆಯಿತು 
ಕೆಲವು ಕಿಡಿಗೇಡಿಗಳು ರಾಜಕೀಯ ಲಾಭಕ್ಕಾಗಿ ಜಿಲ್ಲೆಯ ಕೋಮು ಸೌಹಾರ್ದ ಹಾಳು ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ
– ಸಿ.ಕುಮಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಐಟಿಯು
ಈ ಸೌಹಾರ್ದ ನಡಿಗೆಯಲ್ಲಿ ಭಾಗವಹಿಸಬಾರದು ಎಂದು ಎಷ್ಟೇ ಅಡೆತಡೆ ಒಡ್ಡಿದರೂ ನಾವು ಇಂದು ಭಾಗವಹಿಸಿ ಬೆಂಬಲ ಸೂಚಿಸಿದ್ದೇವೆ
– ಇಲಿಯಾಸ್ ಅಹಮದ್ ಶ್ರೀರಂಗಪಟ್ಟಣ ಕೋಮು ಸೌಹಾರ್ದ ವೇದಿಕೆ 
ಬಿಜೆಪಿಯವರು ಅಧಿಕಾರ ದಾಹಕ್ಕೆ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧರಿದ್ದಾರೆ. ಹೆಣದ ಮುಂದೆ ರಾಜಕೀಯ ಮಾಡುತ್ತಿದ್ದಾರೆ
– ದೇವಿ ಜನವಾದಿ ಮಹಿಳಾ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.