
ಮದ್ದೂರು: ತಾಲ್ಲೂಕಿನ ಹೆಮ್ಮನಹಳ್ಳಿ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಮಾರ್ಚ್ 5 ಹಾಗೂ 6ರಂದು ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ 5ರಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಚೌಡೇಶ್ವರಿ ಅಮ್ಮನವರ ದೇಗುಲದ ಅಮೃತ ಮಣ್ಣಿನ ದ್ವಾರವನ್ನು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ತೆರೆಯಲಾಗುವುದು. ಕಳೆದ ವರ್ಷ ಅಮ್ಮನವರ ಗುಡಿಯಲ್ಲಿ ಹಚ್ಚಲಾಗಿದ್ದ ನಂದಾದೀಪದ ದರ್ಶನದೊಂದಿಗೆ ಅಮ್ಮನವರ ದರ್ಶನದ ಭಾಗ್ಯ ಭಕ್ತರಿಗೆ ಸಿಗಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ದೂರದ ಊರುಗಳಿಂದ ಬರುವ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಅಮ್ಮನವರ ಬಂಡಿ ಉತ್ಸವ ನಡೆಯಲಿದ್ದು, ರಾತ್ರಿ 12 ಗಂಟೆಗೆ ಅಮ್ಮನವರ ಕರಗ ಉತ್ಸವವು ಗ್ರಾಮದಲ್ಲಿ ನಡೆಯಲಿದೆ. ರಾತ್ರಿ 12.30ಕ್ಕೆ ಸರಿಯಾಗಿ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ.
6ರಂದು ಬೆಳಗಿನ ಜಾವ 4 ಗಂಟೆಗೆ ಅಮ್ಮನವರ ಉತ್ಸವದೊಂದಿಗೆ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ವೇಳೆಗೆ ಮಹಾ ರಥೋತ್ಸವ ನಡೆಯಲಿದ್ದು, ರಾತ್ರಿ 12 ಗಂಟೆಗೆ ಪುನಃ ಅಮ್ಮನವರ ಗರ್ಭಗುಡಿಯ ದ್ವಾರವನ್ನು ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬೀಳಲಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಎಚ್.ಕೆ. ಕೃಷ್ಣ, ಗೌರವಾಧ್ಯಕ್ಷ ದೊಡ್ಡಕೆಂಪೇಗೌಡ, ಕಾರ್ಯದರ್ಶಿ ಎಚ್.ಎಸ್. ಜೈಶಂಕರ್, ಖಜಾಂಚಿ ರಾಜ್ ಕುಮಾರ್, ಉಪಾಧ್ಯಕ್ಷ ಎಚ್.ಕೆ. ಜಯಶಂಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.