
ಮದ್ದೂರು: ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ವಿರೋಧಿಸಿ ಸೋಮವಾರ ಹೆದ್ದಾರಿ ತಡೆ ನಡೆಸುತ್ತಿದ್ದ 80ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೆಜ್ಜಲಗೆರೆ ಗ್ರಾ.ಪಂ ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು.
ಧರಣಿ 50 ಪೂರೈಸಿದ ನಿಮಿತ್ತ, ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಸುಮಾರು 300 ಮಂದಿ ಗ್ರಾಮಸ್ಥರು ಮೈಸೂರು ಬೆಂಗಳೂರು ಸರ್ವಿಸ್ ಹೆದ್ದಾರಿಯಲ್ಲಿನ 2 ಬದಿಗಳಲ್ಲಿ ರಸ್ತೆ ತಡೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ಗ್ರಾಮಸ್ಥರು ಆಗಮಿಸಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಹಾಗೂ ಶಾಸಕ ಕೆ.ಎಂ. ಉದಯ್ ಅವರ ನಿಲುವಿನ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೂ ಮೊದಲು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ರಸ್ತೆ ತಡೆ ಕೈಬಿಡಲು ಪ್ರತಿಭಟನಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಪ್ರಯೋಜವಾಗಲಿಲ್ಲ.
ನಂತರ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಸುನಂದಾ ಜಯರಾಮು, ಲಿಂಗಪ್ಪಾಜಿ, ಶಂಕರ್, ಜಿ.ಪಿ. ಯೋಗೇಶ್, ವೀರಪ್ಪ, ಚಂದ್ರಶೇಖರ, ಶಾಂತಮ್ಮ, ಗೌರಮ್ಮ, ಜಯಮ್ಮ ಸೇರಿ ಸುಮಾರು 80ಕ್ಕೂ ಹೆಚ್ಚು ಪ್ರತಿಟನಕಾರರನ್ನು ವಶಕ್ಕೆ ಪಡೆದು 3 ವಾಹನಗಳಲ್ಲಿ ಮಂಡ್ಯದ ಪೊಲೀಸ್ ಠಾಣೆಗೆ ಕರೆದೊಯ್ದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಯಶವಂತ ಕುಮಾರ್, ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಸುನಂದಾ ಜಯರಾಮ್ ಖಂಡನೆ: ಈ ವೇಳೆ ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ಮಾತನಾಡಿನಗರ ಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ನಿರಂತರವಾಗಿ 50 ದಿನಗಳ ಹೋರಾಟವನ್ನು ನಡೆಸುತ್ತಿದ್ದರೂಸರ್ಕಾರದ ಯಾವುದೇ ಪ್ರತಿನಿಧಿಗಳು ಅಧಿಕಾರಿಗಳು ರೈತರಗ್ರಾಮಸ್ಥರು ಆಶೋತ್ತರಗಳಿಗೆ ಸ್ಪಂದಿಸದೆ ನಿರ್ಲಕ್ಷ ಮಾಡಿದ್ದಾರೆ ಇದರ ವಿರುದ್ಧವಾಗಿ ರಸ್ತೆ ತಡೆ ಕಾರ್ಯಕ್ರಮವನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ಮಾಡಲು ಹೊರಟಾಗ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅವಕಾಶ ಮಾಡಿಕೊಡದೆ ರೈತರ ಹೋರಾಟವನ್ನು ದಿಕ್ಕು ತಪ್ಪಿಸುವ ಸಲುವಾಗಿ ರೈತರನ್ನು ಮಹಿಳೆಯರು ಮತ್ತು ಗ್ರಾಮಸ್ಥರನ್ನು ಭಯಭೀತರನ್ನಾಗಿ ಮಾಡುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸುಮಾರು 80 ಕ್ಕೂ ಹೆಚ್ಚು ಗ್ರಾಮಸ್ಥರನ್ನು ಬಂಧಿಸಿರುವುದು ಖಂಡನೀಯವೆಂದು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.