
ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಗೆಜ್ಜಲಗೆರೆ, ಗೊರವನಹಳ್ಳಿ ಸೇರಿದಂತೆ 4 ಗ್ರಾ.ಪಂ. ಮುಖಂಡರ ಜೊತೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.
ಮದ್ದೂರು: ಮದ್ದೂರು ನಗರಸಭೆಗೆ ನಾಲ್ಕು ಗ್ರಾಮ ಪಂಚಾಯಿತಿಗಳ ಸೇರ್ಪಡೆ ವಿಚಾರವನ್ನು ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಗೆಜ್ಜಲಗೆರೆ ಗ್ರಾ.ಪಂ. ಹಾಗೂ ಗೊರವನಹಳ್ಳಿ ಗ್ರಾ.ಪಂ. ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
‘ತಾಲ್ಲೂಕಿನ ನಾಲ್ಕು ಗ್ರಾ.ಪಂ.ಗಳಾದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿಯನ್ನು ನಗರಸಭೆಗೆ ಸೇರಿಸಿಕೊಂಡಿರುವ ಬಗ್ಗೆ ಹಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ಕರೆಯಲಾಗಿತ್ತು. ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲು ಜಿಲ್ಲಾಡಳಿತ ಹಾಗೂ ನಾವು ಮನವಿ ಮಾಡಿದೇವು. ಆದರೆ ಪ್ರತಿಭಟನೆ ನಿಲ್ಲಿಸಲು ಮುಖಂಡರು ಒಪ್ಪಲಿಲ್ಲ’ ಎಂದರು.
‘ಸಂಬಂಧಪಟ್ಟ ವಿಷಯವು ನ್ಯಾಯಾಲಯದಲ್ಲಿರುವುದರಿಂದ ಗ್ರಾಮಸ್ಥರು ಹಾಗೂ ಮುಖಂಡರ ಬೇಡಿಕೆಗಳನ್ನು ಮುಖ್ಯಮಂತ್ರಿ, ಅಧಿಕಾರಿಗಳ ಜೊತೆ ಸಭೆ ನೆಡೆಸಿ ಆದಷ್ಟು ಬೇಗ ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದೇವೆ’ ಎಂದರು.
ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ‘ಗ್ರಾಮಗಳ ಉಳಿವಿಗಾಗಿ ನಮ್ಮ ಹೋರಾಟದ ಉದ್ದೇಶಗಳ ಬಗ್ಗೆ ಜಿಲ್ಲಾಡಳಿತ, ಸಚಿವರು ಹಾಗೂ ಶಾಸಕರಿಗೆ ಮನದಟ್ಟು ಮಾಡಿದ್ದೇವೆ, ಪ್ರಮುಖವಾಗಿ 5 ಸಾವಿರ ಎಕರೆ ಹಸಿರು ಪ್ರದೇಶ ಹಾಳಾಗುತ್ತದೆ ಹಾಗೂ ನಮ್ಮ ಅಚಲ ನಿರ್ಧಾರವನ್ನೂ ತಿಳಿಸಿದ್ದೇವೆ’ ಎಂದರು.
ನಾಗಮಂಗಲ ತಾಲ್ಲೂಕು ವ್ಯಾಪ್ತಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಈ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದು ಅಗತ್ಯ ಕ್ರಮವಹಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.